ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ.

"ಸಾsಮೀ? ”
"ಯಾರದು?"
"ನಾನು ಬುದ್ಧಿ, ಸೋಮ."
"ಓ, ಹೋ, ಸೋಮನೋ?" ರಾಮರಾಯರು ಹುಬ್ಬು ಗಂಟಿಕ್ಕಿ ಕೊಂಡೇ ಹೊರಬಂದರು. ಸೋಮ ಅವರನ್ನು ನೋಡಿ ಬಗ್ಗಿ ವಿನಯದಿಂದ ನಮಸ್ಕರಿಸಿ " ಏನೋ ಸುದ್ದಿ ಕೇಳಿದೆ, ತಮ್ಮ ತಾಂವಾ ಓಡಿ ಬಂದೆ."
"ಹೌದಪ್ಪಾ, ಮೂಗು ಮುಚ್ಚಿದರೇ ತಾನೇ ಬಾಯಿ ತೆರೆಯೋದು"

"ಇಷ್ಟು ದಿನಾ ತಡದಿದ್ದೀರಿ ಬುದ್ದಿ, ಇದೊಂದು ವರ್ಸ ತಡೆಯಾಕೆ ಆಗದೇ ಬುದ್ದಿ, ಈ ಸಲದ ಅಡಿಕೆ ಫಸಲು ಕೈಗೆ ಹತ್ತಿದಾಕ್ಷಣ, ತಮ್ಮ ರಕಮು ಬಡ್ಡಿ ಸಮೇತ ತಿರುಗುಸ್ತೇನೆ. ಬುದ್ಧಿ, ತಮ್ಮ ಕಾಲ ಬೀಳ್ತೆನೆ."

ಸೋಮನ ದೈನ್ಯದ ಕೂಗಿಗೆ ರಾಮರಾಯರ ಹೃದಯ ಕರಗಲಿಲ್ಲ. ರಾಮರಾಯರ ಹೃದಯ ಹಿಮಾಲಯದಂತೆ ಅಚಲ ಎಂದು ಊರಿಗೇ ಗೊತ್ತಿತ್ತು. ರಾಮರಾಯರ ಕಾಲಿಗೆ ಬಿದ್ದ ಆ ಸೋಮ ಕಣ್ಣೀರ ಕೋಡಿಯನ್ನೇ ಹರಿಸಿದ್ದ. ಆ ಕಣ್ಣೀರಿಗೆ ರಾಮರಾಯರ ಕಾಲಿನ ಹೊರಚರ್ಮ ಒದ್ದೆಯಾಗಿತ್ತೇ ಹೊರತು ಒಳಹೃದಯ ತೊಯ್ದಿರಲಿಲ್ಲ. ತಿರಸ್ಕೃತ ನಗುವಿನೊಂದಿಗೆ ರಾಮರಾಯರು ಹೇಳಿದರು:

"ನನ್ನ ಕಾಲಿಗೇಕೊ ಬೀಳೋದು, ದೇವರ ಕಾಲಿಗಾದರೂ ಬೀಳ್ಹೋಗು"

"ನನ್ನ ಪಾಲಿಗೆ ನೀವೇ ದೇವ್ರು.”