ಈ ಪುಟವನ್ನು ಪ್ರಕಟಿಸಲಾಗಿದೆ

೭೮

ವೈರಾಗ್ಯ-ವೈಯ್ಯಾರ


ಆ ಊರಿಗೆ ಬಂದು ಒಂದು ಯುಗಾದಿ ಕಳೆದು ಹೋಯಿತು. ಗುಡದಪ್ಪ ಈಗ ನಮ್ಮ ಮನೆಯವರಿಗೆಲ್ಲ ತೀರ ಪರಿಚಿತನಾಗಿ ಬಿಟ್ಟಿದ್ದಾನೆ. ಹರವಾದ ಹಣೆಯಮೇಲೆ ೭ ಮೊಳದ ಪಾವುಡ ಸುತ್ತಿಕೊಳ್ಳುವದು ಅವನ ರೂಢಿ. ಆದರೆ ಬೆನ್ನು ಸ್ವಲ್ಪ ಬಾಗಿಹೋಗಿತ್ತು. ಊರ ಹೊಸ ಬಟ್ಟೆಗಳನ್ನು ಹಸನು ಮಾಡಿಕೊಟ್ಟುದರ ಪರಿಣಾಮವಾಗಿ ಬೆನ್ನು ಅರೆಬಾಗಿ ಹೋಗಿತ್ತು. ವಯಸ್ಸು ಬರೀ ಮೂವತ್ತೈದಾದರೂ, ಅವನ ಮುಖದ ಮೇಲೆ, ನೇಸರು ಪಡುವಣಕಿಳಿಯುವ ಕಾಂತಿ ಪಸರಿಸಿತ್ತು. ಗುಡದಪ್ಪ ಬರೀ ಅಗಸನಾಗಿರಲಿಲ್ಲ. ಓದುಗನಾಗಿದ್ದ. ಅಧ್ಯಾತ್ಮಿಕ ಕಥೆಗಳನ್ನು ಹೇಳುವದಕ್ಕೂ ಕೇಳುವದಕ್ಕೂ ತುಂಬಾ ಆಸಕ್ತಿ ಅವನಿಗೆ. ಅವನ ಪ್ರತಿ ಮಾತಿನಲ್ಲಿ ವೈರಾಗ್ಯರಸ ತುಂಬಿ ತುಳುಕುತ್ತಿತ್ತು. ಸಾಯಂಕಾಲ ಬಟ್ಟೆಗಳನ್ನು ಒಣಗಿಸಿ ಅವರವರ ಬಟ್ಟೆಗಳನ್ನು ಮನೆಗೆ ಮುಟ್ಟಿಸಿ ನೇರವಾಗಿ ನಮ್ಮ ಮನೆಗೆ ಬಂದು ಬಿಡುತ್ತಿದ್ದ. ನಮ್ಮ ಮನೆಗೆ ಬರುವುದಕ್ಕೆ ಮುಖ್ಯ ಕಾರಣವೆಂದರೆ, ಅಲ್ಲಿ ನಮ್ಮ ತಂದೆಯವರು ತರಿಸಿದ ವರ್ತಮಾನ ಪತ್ರಗಳನ್ನು ಓದುವದಕ್ಕೆ. ನಮ್ಮ ಮನೆಗೆ ಬಂದನಂತರ ನಾವು ಕೊಟ್ಟ ಚಹದ ಗುಟಕನ್ನು ಗುಟುಕರಿಸಿ, ಪೇಪರುಗಳನ್ನು ಓದಿ ಆಧ್ಯಾತ್ಮಿಕ ಕಥೆಗಳಿಗೆ ಸುರು ಮಾಡಿ ಬಿಡುತ್ತಿದ್ದ. ಅವನು ಸದಾ ಹೇಳುವ ಮಾತುಗಳೆಂದರೆ "ಇಲ್ಲೇನೈತಿ, ಮೂರು ದಿನದ ಜಾತ್ರಿ. ಎಲ್ಲಾ ಮಾಡಿಸಾಂವಾ ಅಲ್ಲಿ ಕೂತಾನು. ಅದು ನಂದು, ಇದು ನಂದು ಎಂದು ಬಡಿದಾಡೋ ಬಂಟಗ ಅದನ್ನ ಒಯ್ಲಾಕ ಆಗತೈತೇನು? ಮಾರಿ ಮಣ್ಣಾಗ ಅಡಗಿದ ಮ್ಯಾಗ ಅವಂದೇನೈತಿ, ಹಿಡಿಮಣ್ಣು”

ವಾಕ್ಯದ ಕೊನೆಗೊಂದು, ದೀರ್ಘ ಶ್ವಾಸ ಬಿಡುತ್ತಿದ್ದನು.

ನಮ್ಮ ಮನೆಯಲ್ಲಿ ನಾನೊಬ್ಬ ಅವನ ನಿಕಟ ಪರಿಚಯದ ಗೆಳೆಯನಾಗಿಬಿಟ್ಟಿದ್ದೆ. ನನಗಾಗ ಕತೆಗಳನ್ನು ಕೇಳುವದರಲ್ಲಿ ಬಲು ಹುರುಪು. ಚಿಕ್ಕವಯಸ್ಸಿನಲ್ಲಿ ಹೀಗಾಗುವದು ಸ್ವಾಭಾವಿಕವಲ್ಲವೇ ? ಸಾಯಂಕಾಲ ಒಳಅಂಗಳದಲ್ಲಿ ಅವನನ್ನೆಳೆದುಕೊಂಡು ಹೋಗಿ ಕತೆ ಹೇಳುವದಕ್ಕಾಗಿ ಕೂಡಿಸಿಕೊಳ್ಳುತ್ತಿದ್ದೆ. ಅವನು ಕತೆ ಹೇಳುತ್ತಿರಬೇಕು, ನಾನು ಕೇಳುತ್ತಿರಬೇಕು. ಕತ್ತಲೆ ಮುಸುಕಿದರ ಪರಿವೆ ಇಬ್ಬರಿಗೂ ಆಗುತ್ತಿರಲಿಲ್ಲ. ಆಗ ಒಂದು ಹಣ್ಣು ಮುದುಕಿ ಬಂದು ಒಟಗುಡುತ್ತ ಗುಡದಪ್ಪನನ್ನು ಕರೆದುಕೊಂಡು