ಈ ಪುಟವನ್ನು ಪ್ರಕಟಿಸಲಾಗಿದೆ

೮೬

ನಡುವಿನ ಪರದೆ

ಗೊಂದಲದಲ್ಲಿ ಸಿಲುಕಿದಾಗಲೇ, ಎದುರು ಗೋಡೆಯ ಮೇಲಿನ ಗಡಿಯಾಳ 'ಢಣ್' ಎಂದು ಗಂಟೆ ಬಾರಿಸಿ, ತನ್ನ ಕರ್ತವ್ಯ ನೆರವೇರಿಸಿತು.

ಆ ಸಪ್ಪುಳದಿಂದ ನಾಯರರಿಗೆ ಮತ್ತಿಷ್ಟು ನೋವಾಯಿತು. 'ಡಾಕ್ಟರರಂತೆಯೆ ಈ ಯಂತ್ರವೂ ಕಠೋರವಾಗಿದೆಯೋ?' ಎಂದಂದುಕೊಂಡರು. "ಅಬ್ಬಾ! ಆರುವರೆ ಗಂಟೆ. ಇನ್ನು ಕೇವಲ ೧೪ ತಾಸುಗಳಷ್ಟೇ ಇಲ್ಲಿರುವುದು. ಅಷ್ಟೇ ಸಹವಾಸ!" ಎಂದು ದೀರ್ಘಶ್ವಾಸ ಬಿಟ್ಟು, ಮಂಚದಿಂದ ಕೆಳಗಿಳಿಯುವ ಮೊದಲೇ, ಅವರ ಮನಸೆಳೆದ ನರ್ಸ್ ಜಾನಕೀ ಮೆನನ್ ಒಳಗೆ ಬಂದಳು. ಅವಳು ಬಂದುದನ್ನು ನೋಡಿ ರಾಮನ್, ತಮ್ಮ ಕಾಲುಗಳನ್ನು ಮತ್ತೆ ಮಂಚದ ಮೇಲೆಳೆದುಕೊಂಡರು. ಜಾನಕಿ ಒಳಗೆ ಬಂದವಳೇ, ರಾಮನ್ ಹಿಸ್ಟರಿ ಶೀಟನ್ನು ಕೈಯಲ್ಲಿ ತೆಗೆದುಕೊಂಡು, ಬಾಟ್ಲಿಯಿಂದ ಗ್ಲಾಸಿನಲ್ಲಿ ಔಷಧ ಸುರಿದು, ಅದನ್ನು ರಾಮನ್ ರ ಕೈಯಲ್ಲಿ ಕೊಡುತ್ತ ನಗುಮುಖದಿಂದ "ತೆಗೆದುಕೊಳ್ಳಿ! ಈಗ ತುಂಬಾ ಹುಶಾರಿಯಾಗಿದ್ದೀರಿ!" ಎಂದು ಹೇಳಿ, ಅವರ ಹಿಸ್ಟರೀ ಶೀಟನ್ನು ತುಂಬಲು ತೊಡಗಿದಳು. ರಾಮನ್‌ರು ಮಾತ್ರ ಕೈಯಲ್ಲಿ ಗ್ಲಾಸನ್ನ ಹಿಡಿದುಕೊಂಡು ಮೌನರಾಗಿ ಅವಳನ್ನೇ ದೃಷ್ಟಿಸಹತ್ತಿದರು.

ದುಂಡು ಮುಖ, ಕೊರೆದ ಕಣ್ಣು, ಹಳದಿ ಕೂಡಿದ ಬಿಳಿಯ ಮೈಬಣ್ಣ, ಉಂಗುರುಗೂದಲು, ಪುಷ್ಟ ಎದೆ, ಬ್ರಹ್ಮ ಪ್ರಮಾಣಬದ್ಧ ಪಡಿಯಚ್ಚಿನಲ್ಲಿ ಎರಕ ಹೊಯ್ದು ಸೌಂದರ್ಯದ ಗೊಂಬೆಯಾಗಿದ್ದಳು ಜಾನಕಿ. ಜಾನಕಿಯಲ್ಲಿಯ ಈ ನಿಸರ್ಗದತ್ತ ಸೌಂದರ್ಯ, ರಾಮನ್‌ರ ದೃಷ್ಟಿಯನ್ನು ಬೇರೆ ಕಡೆಗೆ ಸರಿಸಲು ಆಸ್ಪದ ಕೊಡಲಿಲ್ಲ. “ಅಯ್ಯೋ ! ಇಂಥವಳ ಜತೆಯಲ್ಲಿ ಕೇವಲ ೧೪ ತಾಸುಗಳಷ್ಟೇ ಅವಧಿಯ ಸಹವಾಸವೇ?” ಎಂದು ಮರುಗಿದರು.

ಜಾನಕಿ ತನ್ನ ಕೆಲಸ ಮುಗಿಸಿ ರಾಮನ್‌ರತ್ತ ನೋಡಿದಳು. ಕೈಯಲ್ಲಿಯ ಗ್ಲಾಸು ಹಾಗೆಯೇ ಇದೆ. ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತದೆ. ತನ್ನನ್ನೇ ನೋಡುತ್ತಿದ್ದಾರೆ. ಅವಳಿಗೇಕೋ ರಾಮನ್‌ರ ಇಂದಿನ ಸ್ಥಿತಿಯನ್ನು ನೋಡಿ ತುಂಬ ಆಶ್ಚರ್ಯವಾಯಿತು. 'ನಿತ್ಯವೂ ನಗುಮುಖದಿಂದ ಔಷಧಿ ಕುಡಿಯುವವರು, ಇಂದೇಕೆ ಹೀಗೆ?'––ಎಂದು ಯೋಚಿಸಿದಳು.