ಈ ಪುಟವನ್ನು ಪ್ರಕಟಿಸಲಾಗಿದೆ

೯೦

ನಡುವಿನ ಪರದೆ

ಡುತ್ತಿದ್ದರು. ಎಲ್ಲರೂ ಕೇವಲ ಭ್ರಮರವೃತ್ತಿಯವರಾಗಿಯೆ ಕಂಡರು. ಈ ನರ್ಸ್ ವೃತ್ತಿಯನ್ನು ನಾನು ಬಹಳೇ ಜಾಗ್ರತೆಯಿಂದ ನಡೆಸಿಕೊಂಡು ಬಂದಿದ್ದೇನೆ. ಯಾರಿಗೂ ನನ್ನ ಮೈಯ್ಯನ್ನು ಮುಟ್ಟಲು ಅವಕಾಶ ಕೊಡಲಿಲ್ಲ. ಈ ನನ್ನ ಕಟ್ಟಳೆಯನ್ನು ಮುರಿದವರು ನೀವೇ. ಮೇಲಧಿಕಾರಿಗಳ ಬಳಿ ಹೋಗಿ ಈ ನಿಮ್ಮ ಕೃತಿಯನ್ನು ದೂರಬಹುದಾಗಿತ್ತು. ಆದರೆ ನಿಮ್ಮ ಬಗ್ಗೆ ನನ್ನಲ್ಲಿ ಬೆಳೆದ ಆತ್ಮೀಯ ಭಾವನೆ, ನನಗೆ ಹಾಗೆ ಮಾಡಿಸಕೊಡಲಿಲ್ಲ. ನನ್ನ ದುರ್ಬಲತೆಯನ್ನು ನಾನು ಹಳಿದುಕೊಂಡರೂ, ಒಂದು ಮನಸ್ಸು ಮಾತ್ರ "ಭಲೇ" ಎಂದು ಹೇಳಿತು. ತಮ್ಮ ಜತೆಯಲ್ಲಿ ಮದುವೆಯಾಗಲು ನಾನೂ ಹಾತೊರೆಯುತ್ತಿದ್ದೇನೆ. ಆದರೂ ಪ್ರೇಮವಿವಾಹವಾಗುವ ಮೊದಲು, ಇಬ್ಬರೂ ಪರಸ್ಪರರು ಪರಸ್ಪರರನ್ನು ಅರಿಯಬೇಕು. ಇಲ್ಲವಾದರೆ––

ಪ್ರತಿಯೊಬ್ಬರ ಜೀವನ ಏನೂ ಅಡೆ-ತಡೆ ಇಲ್ಲದೆ ನಡೆಯುವುದು ಅಸಾಧ್ಯ: ಕೆಲ-ಕೆಲವರ ಜೀವನದಲ್ಲಿ ತುಂಬ ದುರ್ಗಮ ಮಾರ್ಗಗಳು ಬರುತ್ತವೆ. ನಾನೂ ನಿಮ್ಮೂರಿನವಳೇ. ಟ್ರಿಚ್ಚಿಯಲ್ಲಿ ಕ್ಯಾಂಟೋನ್‌ಮೆಂಟಿನ ಬೀದಿಯಲ್ಲಿಯೇ ನಮ್ಮ ಮನೆ. ಒಂದೇ ಊರವರಾದುದರಿಂದ, ನಡೆದುಹೋದ ಮಾತನ್ನು ಈಗ ಬಿಚ್ಚಿಡುವುದು ಸರಿಯಲ್ಲ. ಇಂದಿಲ್ಲ ನಾಳೆ ಅದು ತಮಗೆ ಗೊತ್ತೇ ಆಗಬಹುದು. ಕೂಡುವ ಮೊದಲೇ ಆಡುವುದು ಒಳಿತು. ಕೂಡಿದ ಮೇಲಿನ ಕಾಡಾಟ ಒಳ್ಳೆಯದಲ್ಲ–-ಒಂದೇಮಾತಿನಲ್ಲಿ ಹೇಳಿ ಮುಗಿಸುತ್ತೇನೆ; ನನ್ನ ತಂದೆಯ ಸಾಲಕ್ಕಾಗಿ ಪಠಾಣನೊಬ್ಬ ನನ್ನನ್ನು........ಮುಂದೆ ನನ್ನ ತಂದೆಯ ಸಾವು--ನನ್ನ ಪ್ರಸೂತಿ–-ಆ ಕೂಸಿನ ಸಾವು--ನನ್ನ ಕಲಂಕ-ಇವೇ ನನ್ನನ್ನು ಊರು ಬಿಡಿಸಲು ಕಾರಣವಾದುವು. ನರ್ಸ್‌ವೃತ್ತಿಯನ್ನು ಕೈಕೊಂಡೆ. ಈ ಐದು ವರ್ಷಗಳಲ್ಲಿ ನಡೆದು ಹೋದ ಮಾತುಗಳನ್ನು ಮರೆತುಹೋದೆ. ಈಗ ಮದುವೆಯ ಮಾತು ಬಂದಾಗ ಅದರ ನೆನಪೂ ಬರುತ್ತದೆ. 'ನಡೆದುಹೋದ ಮಾತು ನನ್ನ ಸುಂದರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದರೆ!'-– ಎಂದು ಧೈರ್ಯವಾಗಿ-ಸತ್ಯವಾಗಿ ತಮ್ಮ ಮುಂದೆ ಈ ಮಾತುಗಳನ್ನು ಹೇಳಿಬಿಡುತ್ತಿದ್ದೇನೆ. ತಮಗೆ ತಿಳಿದಂತೆ ಉತ್ತರ ಬರೆಯಿರಿ. ಹೆಚ್ಚಿಗೆ ಬರೆಯಲು ಮತ್ತಾವ ಸಮಾಚಾರವೂ ಇಲ್ಲ. ತಾವು ಉದಾರಬುದ್ಧಿಯಿಂದ ನನ್ನನ್ನು ಕ್ಷಮಿಸಿ ಸ್ವೀಕರಿಸಿದರೆ,