ಈ ಪುಟವನ್ನು ಪರಿಶೀಲಿಸಲಾಗಿದೆ

ರಕ್ತ ಸರೋವರ 25

    ಜೈನಬಿ ಹುಚ್ಚಿಯಂತೆ ಧಾವಿಸಿ ಬಂದು ಕಿಶನನ ಹೆಗಲನ್ನಲುಗಿಸಿ ಚೀರಾ

ಡಿದಳು:

   “ಅಣ್ಣ ಅಣ್ಣ ! ಎಲ್ಲಿ? ಶೇಕೆ ಎಲ್ಲಿ?"
   ಶೇಕ,  ವಿಹಾರ   ಸರೋವರದ  ಜಲಗರ್ಭದಲ್ಲಿ  ಸಮಾಧಿಸ್ಥನಾಗಿದ್ದ.

ಶಾಂತಿಯ ಪರಮ ಶಾಂತಿಯ ತಾಣ ಅದು. ಅಲ್ಲಿ ಹೂರಾಶಿಯ ಕೆಳಗೆ ಕೆಂದಾವರೆಯ ದಂಟುಗಳಡಿಯಲ್ಲಿ ಆ ವೀರ ವಿರಮಿಸುತ್ತಿದ್ದ.

   ಶೇಕನ ಮನೆಯ ಸುತ್ತುಮುತ್ತಲಿನವರೆಲ್ಲ ಬಂದು ಸರೋವರದ  ದಂಡೆ

ಯಲ್ಲಿ ನಿಂತು ನೋಡಿದರು. ಅಲ್ಲೇ ಒಂದು ಮೈಲಿನಾಚೆ ಇಪ್ಪತ್ತಾರು ಜೀವ ಗಳು ಪ್ರಾಣ ಬಿಟ್ಟಿದುವು. ಅಲ್ಲೆ_ಓ ಅಲ್ಲೇ ಶೇಕ ಕಣ್ಮರೆಯಾಗಿದ್ದ.

    ಬೆಳಕು ಚೆನ್ನಾಗಿ ಹರಡಿತ್ತು.  ಬೇಕೊ ಬೇಡವೊ  ಎಂದು  ಸೂರ್ಯ

ಮೇಲೆ ಬರುತ್ತಿದ್ದ. ಹಿಮರಾಶಿ “ಒಲ್ಲೆ ಕರಗಲೊಲ್ಲೆ!” ಎನ್ನುತ್ತಿತ್ತು. ತಾವರೆಗಳು “ಬೇಡ ನಾವು ಅರಳುವುದಿಲ್ಲ!” ಎನ್ನುತ್ತಿದ್ದವು. ಗಾಳಿ ಮೆಲ್ಲ ಮೆಲ್ಲನೆ ತಟಾಕದ ಮೇಲಿಂದ ಬೀಸುತ್ತಿತ್ತು. ವಿಹಾರ ಸರೋವರ ರಕ್ತ ಸರೋವರವಾಗಿ ರುದ್ರಭೀಕರವಾಗಿತ್ತು.


                                         _೧೯೪೬