ಈ ಪುಟವನ್ನು ಪರಿಶೀಲಿಸಲಾಗಿದೆ
34
ನಿರಂಜನ: ಕೆಲವು ಸಣ್ಣ ಕಥೆಗಳು

ಮೀರಿ ವರ್ತಿಸಬೇಡವೆಂದು ಕೇಳುತ್ತಿದ್ದಾಳೆ; ನಾಳೆಯ ಒಂದು ತುತ್ತು ಅನ್ನ
ಕಸಿಯಬೇಡವೆಂದು ಮೊರೆಯಿಡುತ್ತಿದ್ದಾಳೆ.
ಈತ ಗಾಬರಿಯಾಗಿ ನಿಂತು ನೋಡಿದ. ಜನರಿನ್ನೂ ಇದ್ದರು. ಅವರಿಗೆ
ಕೇಳಿಸಬಹುದು. ಯಾರಾದರೂ ತನ್ನನ್ನು ಬೆನ್ನಟ್ಟಬಹುದು.......
ಆ ಆಸಾಮಿ ಥಟಕ್ಕನೆ ಹಿಂತಿರುಗಿದ. ಆಕೆಯ ಗಂಟಲಿಗೆ ಕೈ ಹಾಕಿ
ಹಿಸುಕಿ ನೆಲಕ್ಕುರುಳಿಸಿದ. “ಹೊಲಸು ರಂಡೆ!” ಎಂದು ಶಪಿಸಿದ. ಆಕೆಯ
ಹೊಟ್ಟೆಗೆ ಬೂಟುಗಾಲಿನಿಂದ ಒದೆದ.
ಕಾಣಿ ಹಾಗೆಯೇ ಬಿದ್ದು ಕೊಂಡಳು...........ಗಂಟಲಲ್ಲಿ ಏನೋ ಸ್ವರ
ಬರುತ್ತಿತ್ತು. ಆದರೆ ಅದು ಹೊರಗೆ ಕೇಳಿಸುತ್ತಿರಲಿಲ್ಲ.
ಉಸಿರಾಡುತ್ತಿತ್ತು... ಮೆಲ್ಲಮೆಲ್ಲನೆ....ನಿಂತು ನಿಂತು....ನಿಧಾನವಾದ
ಉಸಿರು...ಕೊನೆಯ ಒಂದೆರಡು ಉಸಿರಾಟ.
****
ಬೆಳಗಾಯಿತು.
...ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು
ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು
ಹೊರಳಿಸಿ, ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು ಯಾರೂ ಇರಲಿಲ್ಲ...
.... ಪುರಸಭೆಯ ವ್ಯಾನು ಬಂದು ಕಳೇಬರವನ್ನು ಒಯ್ಯುವುದೆಂದು
ಯಾರೋ ಹೇಳುತ್ತಿದ್ದರು.
ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡಗವೊಂದು ಸುತ್ತು ಸುತ್ತು
ಬರುತ್ತಿತ್ತು.
ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು.
ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.
-ಕೊನೆಯ ಗಿರಾಕಿ.

-೧೯೫೧