ಈ ಪುಟವನ್ನು ಪರಿಶೀಲಿಸಲಾಗಿದೆ

45

ಒಂದೇ ನಾಣ್ಯದ ಎರಡು ಮೈ

ರಾತ್ರಿಯ ಹೊತ್ತು ಬೆಂಗಳೂರು ಬಿಟ್ಟ ನಾವು ಹುಬ್ಬಳ್ಳಿ ತಲುಪಿದಾಗ
ಮಧ್ಯಾಹ್ನವಾಗಿತ್ತು. ಇಡಿಯ ಕಂಪಾರ್ಟಮೆಂಟಿನಲ್ಲಿ ಇದ್ದವರು ನಾಲ್ವೇ ಜನ.
ಪ್ರತಿಯೊಬ್ಬರೂ ಕಾಲು ಚಾಚಿ ಹೊರಳಾಡುವಷ್ಟು ಜಾಗ. ಸುಖ ಪ್ರಯಾಣವೇ
ಎನ್ನಬೇಕು. ರಾತ್ರಿಯೆಲ್ಲ ರೈಲುಗಾಡಿಯ ಸದ್ದೇ ನಮ್ಮ ನಿದ್ದೆಗೆ ಜೋಗುಳ
ವಾಯಿತು. ಬೆಳಗಾದ ಬಳಿಕ ಹರಿಹರದಲ್ಲಿ ಕಾಫಿ ಕುಡಿದು, ತುಂಗಭದ್ರೆಯನ್ನು
ದಾಟಿ, ಮತ್ತೂ ಉತ್ತರಕ್ಕೆ ಮೈ ಚಾಚಿದ್ದ ಕನ್ನಡ ಭೂಮಿಯ ವಿಸ್ತಾರವನ್ನು
ದಿಟ್ಟಿಸುತ್ತ ನಾವು ಸಾಗಿದೆವು.

ನಾವು ನಾಲ್ಕು ಜನ ಎಂದರೆ, ನನ್ನ ಪರಮ ಸ್ನೇಹಿತರು ಮೂವರು
ಮತ್ತು ನಾನು. ಆ ಮೂವರು ಯಾರು ಎನ್ನಲೆ? ಒಬ್ಬ ಪೋಲೀಸ್ ಅಧಿಕಾರಿ
ಮತ್ತು ಇಬ್ಬರು ಪೊಲೀಸರು. ಜತೆಯಲ್ಲಿದ್ದ ನಾನು ಅವರ ಕೈದಿ!

ಹುಬ್ಬಳ್ಳಿಯ ನಿಲ್ದಾಣದಲ್ಲಿ ಹತ್ತು ಜನ ಸಶಸ್ತ್ರ ಪೊಲೀಸರು ಗೌರವ
ರಕ್ಷೆ ಸಲ್ಲಿಸಿದರು-ಪೋಲೀಸ್ ಅಧಿಕಾರಿಗೆ ಮತ್ತು ನನಗೆ ಅವರು ಆಗ ತೊಟ್ಟ
ದ್ದುದು ಗಾಂಭೀರ್ಯದ ಮುಖವಾಡ. ಅದರ ಹಿಂದೆ ಕುತೂಹಲದ, ವಿಸ್ಮಯದ,
ನಿರಾಸೆಯ ಭಾವಗಳನ್ನು ಕಾಣುವುದು ಕಷ್ಟವಾಗಿರಲಿಲ್ಲ. ಮೂರು ವರ್ಷಗಳ
ಕಾಲ ಕಾದು, ನೀರಿನಂತೆ ಹಣ ವೆಚ್ಚ ಮಾಡಿ, ಕೊನೆಗೂ ಸಿಕ್ಕಿ ಬಿದ್ದ ಆರೋಪಿ
ಇಷ್ಟೇನೇ_ಎನಿಸಿರಬೇಕು ಅವರಿಗೆ.

ಕೈದಿಗಳನ್ನೊಯ್ಯುವ ಕರಿಯ ಮೋಟಾರು ಗಾಡಿ, ನೂರು ಮೈಲಿಗಳಾ
ಚೆಯ ಸಮುದ್ರ ತೀರದಿಂದ ಬಂದು ಕಾದಿತ್ತು-ನಮಗಾಗಿ.

ಹುಬ್ಬಳ್ಳಿ ಮಾರ್ಗವಾಗಿ ಗೋಕರ್ಣಕ್ಕೆ ಎಂದಾದರೂ ನೀವು ಹೋಗಿದೀ
ರೇನು? ಆ ದಾರಿಯಲ್ಲಿ ಬಹಳ ದೂರ ಸಾಗಿ ಉತ್ತರಕ್ಕೆ ತಿರುಗಿದರೆ ಕಾರವಾರ
ಸಿಗುತ್ತದೆ. ಕೆಲವು ವರ್ಷಗಳ ಅನಂತರ ಒದಗಿ ಬಂದಿದ್ದ ಪ್ರಯಾಣ. ಅದೂ
ಸರಕಾರದ ಅತಿಥಿಯಾಗಿ! ವಾಸ್ತವದಇ ರುವಿಕೆಯಲ್ಲಿ ನಾನು ಸೆರೆಯಾಳು; ಆದರೆ
ಕಲ್ಪನೆಯ ಸೃಷ್ಟಿಯಲ್ಲಿ, ಕೆಂಪು ಮಣ್ಣಿನ ಸುಡು ಭೂಮಿಯಿಂದ ಕಡಲತಡಿಗೆ