9
ವರೂ ಅಲ್ಲ, ಕೆಟ್ಟವರೂ ಅಲ್ಲ. ಜೀವನ ಇರುವುದು ಹಾಗೆ. ಮನುಷ್ಯ ಸ್ವಭಾವ ಅಂತಹುದು. ಇಂಥವರು ನಮ್ಮ ನೆರೆಹೊರೆಯಲ್ಲಿ ಇರುತ್ತಾರೆ, ನಮ್ಮ ಮನೆಯೊಳಗೇ ಇರುತ್ತಾರೆ, ಕಡೆಗೆ ನಾವೇ ಆಗಿರುತ್ತೇವೆ. ಕೆಲವು ವಿಶಿಷ್ಟ ಕ್ಷಣಗಳಲ್ಲಿ ಕಥೆಯ ನಿರ್ದಿಷ್ಟ ಸಂದರ್ಭಗಳು ನಮ್ಮ ಮುಖಕ್ಕೆ ಹಿಡಿದ ಕನ್ನಡಿಗಳಾಗಬಹುದು.
ಇಲ್ಲಿನ ಕಥೆಗಳಿಗೆ ಒಂದು ಒಟ್ಟು ಒಳನೋಟವನ್ನು ಹರಿಸುವ ಮೊದಲು ಬಿಡಿಬಿಡಿಯ ಚೆಲುವನ್ನು ನೋಡಬಹುದು. ನಿರಂಜನ ಇನ್ನೂ ಶಾಲಾ ಬಾಲಕನಾಗಿರುವಾಗಲೇ 'ಮೋಹಜಾಲ' ಕಥೆಯನ್ನು ಬರೆದವರು. ಸಾಹಿತ್ಯವಾಗಲಿ, ಮೋಹವಾಗಲಿ ತಿಳಿಯದಿದ್ದ ದಿನಗಳಲ್ಲಿ, ಗಿಡದಿಂದ ಸಹಜವಾಗಿ ಒಳಗಿನೊತ್ತಡದಿಂದಲೇ ಮೊಗ್ಗು ಮೂಡುವಂತೆ ಕಥೆ ಹುಟ್ಟಿತ್ತು. ಹೀಗೆ 1937 ರಿಂದ ಆರಂಭವಾಗಿ ಇಂದಿನವರೆಗೆ ನಿರಂತರವಾಗಿ ಬರೆಯುತ್ತ ಬಂದಿರುವ ಕಥೆಗಳಲ್ಲಿ ಹತ್ತನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಈ ಸಂಗ್ರಹದಲ್ಲಿರುವ ಮೊದಲನೆಯ ಕಥೆ ರಚಿತವಾದದ್ದು 1941, ಕಡೆಯ ಕಥೆ 1965, ಅಂದರೆ 25 ವರ್ಷಗಳ ಬೆಳೆಯಲ್ಲಿ ಆಯ್ದ ಹತ್ತು ತೆನೆಗಳು ಇಲ್ಲಿನ ಕಥೆಗಳು.
'ಬಾಪೂಜಿ! ಬಾಪೂ!' ಈ ಕಥಾಗುಚ್ಚದ ಮೊದಲ ಪುಷ್ಪ, ಸ್ವಾತಂತ್ರದ ರೂವಾರಿಯಾದ ಬಾಪೂಜಿ ಇನ್ನೂ ಬದುಕಿದ್ದಾಗಲೇ 1941ರಲ್ಲಿ, ಅವರು ಸತ್ತಂತೆ ಕಲ್ಪಿಸಿ ಬರೆದ ಕಥೆಯೆಂಬ ಕಾರಣಕ್ಕಾಗಿಯೂ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ಕಲೆ ಭವಿಷ್ಯದರ್ಶಿ ಎಂಬ ಲಕ್ಷಣಕ್ಕೆ ಈ ಕಥೆ ಲಕ್ಷ್ಯವಾಗಿದೆ. ಸ್ವಾತಂತ್ರ್ಯ ಗಳಿಸುವ ಪೂರ್ವದಲ್ಲಿ ಇದ್ದ ಆಸೆ ಆಕಾಂಕ್ಷೆ ಧೈಯೋದ್ದೇಶಗಳು ಸ್ವಾತಂತ್ರ್ಯ ಪಡೆದ ಕೆಲವೇ ವರ್ಷಗಳಲ್ಲಿ ವಿಫಲವಾದದ್ದು ಈಗ ಲೋಕ ಅರಿತಿರುವ ವಾಸ್ತವವಾಗಿದೆ. ಆದರೆ ಸ್ವಾತಂತ್ರ ಬರುವ ಮೊದಲೇ ಅದರ ಹೊಸ್ತಿಲ ಹತ್ತಿರ ನಿಂತುಕೊಂಡು ಕಥೆಗಾರರು ಮುಂದೇನಾಗಬಹುದು ಎಂದು ಆಲೋಚಿಸುತ್ತಿದ್ದಾರೆ. ಆ ಮುನ್ನೋಟ ಕಂಡ ದೃಶ್ಯಾವಳಿ ಇಲ್ಲಿ ಸವಿವರವಾಗಿ ದಾಖಲಾಗಿದೆ. ಕಾರ್ಖಾನೆಯ ಮಾಲಿಕ ಈಗ ವಿದೇಶಿ ಅಲ್ಲ ನಮ್ಮವನೇ ಇದ್ದಾನೆ. ಅವನ ತಲೆಯ ಮೇಲೆ ಖಾದಿ ಟೋಪಿಯ ಇದೆ. ಬಾಪೂಜಿಯವರ ತೈಲ ಚಿತ್ರವನ್ನೂ ತೂಗುಹಾಕಿದ್ದಾನೆ. ಯಂತ್ರಗಳ ಯಜಮಾನ ಹೊರಗೆ ದೇಶಭಕ್ತನ ವೇಷದಲ್ಲಿ ರಾರಾಜಿಸುತ್ತಿದ್ದಾನೆ. ಒಳಗೆ ಬೇರೆಯೇ ಆಗಿದ್ದಾನೆ. ಸತ್ಯ, ಅಹಿಂಸೆ, ಗ್ರಾಮೋದ್ಧಾರ ಮುಂತಾದ ಸ್ವಾತಂತ್ರ್ಯದ ಮಂತ್ರಗಳು ತಮ್ಮ ಅರ್ಥ ಕಳೆದುಕೊಂಡಿವೆ.