ಈ ಪುಟವನ್ನು ಪರಿಶೀಲಿಸಲಾಗಿದೆ

72

ನಿರಂಜನ: ಕೆಲವು ಸಣ್ಣ ಕಥೆಗಳು

ವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.

ಗೂಡ್ಸ್‌ ಕಟ್ಟೆಯಲ್ಲಿದ್ದ ಮೂವರು ಹೆಮಾಲರು ಅದೆಷ್ಟು ಹೊತ್ತಿಗೆ ಇತ್ತ ಜಿಗಿದರೊ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವರಾಗಲೇ ಮಗ್ನರಾಗಿದ್ದರು. ಯುವಕರು. ಒಬ್ಬ ನಂತೂ ಮಹಾ ಖದೀಮ.

ಪ್ಯಾಸೆಂಜರ್‌ ಗಾಡಿ. ಹತ್ತುವವರೂ ಕಡಮೆ, ಇಳಿಯುವವರೂ ಕಡಮೆ. ಇಮಾಮ್‍ಸಾಬಿ ಹೊರಗೆ ಹೋಗದೆ ಒಳಗೇ ನಿಂತ.

ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದರಿ ಮಾಯವಾದರು.

ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್‌ಕೇಸನ್ನು ಇಮಾಮ್‌‍ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.

ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯೂ ಪ್ರಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು. ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.

ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು! ಸೀಮೆಎಣ್ಣೆಯ ಆಗಿನ ಮಿಣಿ ಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್‌ ಬಲ್ಬುಗಳೆಲ್ಲಿ! ಆಗ ಸ್ಟೇಷನ್‌ ಮಾಸ್ಟರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಬಕೆಟ್‌ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ. ಗೂಡ್ಸ್‌ ವಿಭಾಗವನ್ನು ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹೆಂಚುಗಳೆಲ್ಪ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತೀಚಿನ ಒಬ್ಬಿಬ್ಬರಂತೂ ಇಮಾಮ್‌ಸಾಬಿಯನ್ನು "ಹಮಾಲ್‌" ಎನ್ನುತ್ತಿರಲಿಲ್ಲ; "ಫೋರ್ಟರ್" ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು, "ಒಂದು ಮಣವನ್ನು ಮೀರದ ಹೇರಿಗೆ ಎರಡಾಣೆ." ಅದನ್ನು ಧರಿಸಲೇಬೇಕಾಗಿ ಬಂದಾಗ ಇಮಾಮ್‌‌ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪ್ರಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ