ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೯೯

ಮಹಾದೇವಿಗೆ ಮಾತು ಚುಚ್ಚಿತು.

``ನಿಮ್ಮ ಮಗಳು ಲೋಕಕ್ಕೆ ವಿರುದ್ಧವಾದ ಮನೋಧರ್ಮವನ್ನುಳ್ಳವಳು ಎಂದು ಲೋಕ ಇಂದಲ್ಲದಿದ್ದರೆ ನಾಳೆ ಕಂಡುಕೊಂಡೀತು. ಅದಕ್ಕಾಗಿ ದುಃಕಿಸಬೇಡ, ಅವ್ವಾ. ನಿಮ್ಮ ಗೌರವಕ್ಕೆ ಕುಂದು ಬರದ ಹಾಗೆ ವರ್ತಿಸುತ್ತೇನೆ. ಇನ್ನು ನಾನು ಬರುತ್ತೇನೆ ಎಂದು ತಂದೆತಾಯಿಗಳಿಬ್ಬರಿಗೂ ನಮಸ್ಕರಿಸಿದಳು. ಮತ್ತೆ ಹೇಳಿದಳು:

``ನನ್ನನ್ನು ನೋಡಲು ಅರಮನೆಗೆ ಬನ್ನಿ ಎಂದು ಹೇಗೆ ನಿಮ್ಮನ್ನು ಕರೆಯಲಿ ? ನಿಮಗೆ ತಕ್ಕ ಮಗಳಾಗುವಂತೆ ಆಶೀರ್ವದಿಸಿ ಎನ್ನುತ್ತಿದ್ದಂತೆಯೇ ಅವಳ ಕಣ್ಣಿನಿಂದ ನೀರು ಉಕ್ಕಿಬಂದಿತು. ತನಗಾಗಿ ಕಾಯುತ್ತಿದ್ದ ಮೇನೆಯನ್ನು ಪ್ರವೇಶಿಸಿ ಕುಳಿತಳು. ಮೇನೆಯ ಬಾಗಿಲು ಮುಚ್ಚಿತು. ಬೋಯಿಗಳು ಹೊತ್ತರು ಮೇನೆಯನ್ನು.

ತಮ್ಮ ಕರುಳಿನ ಕುಡಿಯೇ ಕಿತ್ತು ಹೋಗುತ್ತಿರುವಂತೆ ಅಶ್ರು ತುಂಬಿದ ಕಣ್ಣುಗಳಿಂದ ಓಂಕಾರ-ಲಿಂಗಮ್ಮ ನಿಸ್ಸಹಾಯಕರಾಗಿ ಅತ್ತಲೇ ನೋಡುತ್ತಿದ್ದರು.

ಓಂಕಾರನ ಮನೆಯ ಮುಂದೆ ಸೇರಿದ ನೆರವಿಯೂ ಈ ದುಃಖದಲ್ಲಿ ಭಾಗಿಯಾಗಿತ್ತು.

ಈ ಸಾತ್ವಿಕ ದಂಪತಿಗಳಿಗೆ ಬಂದ ಅನಿರೀಕ್ಷಿತ ದುಃಖವನ್ನು ಕಂಡು ಕೆಲವರಿಗೆ ನಿಜವಾಗಿಯೂ ಸಂತಾಪವಾಗಿದ್ದರೆ, ಇನ್ನು ಕೆಲವರಿಗೆ ಈ ತಮಾಷೆಯನ್ನು ನೋಡುವುದರಲ್ಲಿ ಸಂತೋಷವೇ ಇತ್ತು. ಅವರಿಗೆ ಅನುಕಂಪವನ್ನು ತೋರಿಸುವ ನೆವದಿಂದ ಸಮಾಧಾನವನ್ನು ಪಡೆಯುತ್ತಿದ್ದರು.

ಬಂಗಾರಮ್ಮ - ನಂಜಮ್ಮ ಇವರು ಲಿಂಗಮ್ಮನ ಬಳಿಗೆ ಬಂದಿದ್ದ ಉದ್ದೇಶವಾದರೂ ಅದೇ. ವಿಷಯ ತಿಳಿದೊಡನೆ ತಮ್ಮ ಮನೆಯ ಕೆಲಸವನ್ನೆಲ್ಲಾ ಬಿಟ್ಟು ಬಂದಿದ್ದರು ಬಾಯಿಚಪಲ ತೀರಿಸಿಕೊಳ್ಳುವುದಕ್ಕಾಗಿ. ಮನೆಗೆ ಬಂದವರೆಂಬ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಲಿಂಗಮ್ಮ ಅವರೊಡನೆ ಮಾತನಾಡಿ ಕಳುಹಿಸದೇ ವಿಧಿಯಿಲ್ಲವಾಗಿತ್ತು.

``ನೀ ಏನೇ ಹೇಳು ಲಿಂಗಮ್ಮ, ಮಹಾದೇವಿಯನ್ನು ಹಾಗೆ ಕಳುಹಿಸಬಾರದಾಗಿತ್ತು. ಉಪದೇಶ ಮಾಡಿದಳು ಬಂಗಾರಮ್ಮ.

`ಮಗಳಿಗೆ ನೀವು ಕೊಟ್ಟ ಸ್ವಾತಂತ್ರ್ಯ ಅತಿಯಾಯಿತು. ಅದೇ ಇದಕ್ಕೆಲ್ಲಾ ಕಾರಣ. ಈ ಮೊದಲೇ ಮದುವೆ ಅಂತ ಒಂದು ಮಾಡಿಬಿಟ್ಟಿದ್ದರೆ, ಇದಕ್ಕೆಲ್ಲಾ ಆಸ್ಪದವೇ ಇರಲಿಲ್ಲ.' ಇವರನ್ನೇ ಅಪರಾಧಿಗಳನ್ನಾಗಿ ಮಾಡಿ ಚುಚ್ಚಿದಳು ನಂಜಮ್ಮ.