ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೧೦೫

ಗೆಳೆಯರೂ ಇದ್ದಾರೆ. ಅವರೂ ಇದಕ್ಕೆ ಸಾಕ್ಷಿಯಾಗಿರಲಿ.

``ನಿಜ ; ನಿಮ್ಮಲ್ಲಿ ಈ ಉದಾತ್ತತೆಯ ಅಂಶವನ್ನು ಕಂಡೇ ನಾನು ಇಲ್ಲಿ ನಿಲ್ಲುವ ಮನಸ್ಸು ಮಾಡಿದ್ದೇನೆ. ನಾನು ಬರುವಾಗ ಆಲೋಚಿಸಿದ ನಿರ್ಧಾರವನ್ನು ಬದಲಾಯಿಸಿದ್ದೇನೆ. ಇನ್ನು ನಾನಿಲ್ಲಿ ಇರುವುದಕ್ಕೆ ಏರ್ಪಾಡನ್ನು ಮಾಡಿರಿ.

ವಸಂತಕ ಹೊರಗೆ ಹೋಗಿ ಸೂಚನೆಯನ್ನು ಕೊಟ್ಟ. ಕ್ಷಣಮಾತ್ರದಲ್ಲಿ ಅಂತಃಪುರದ ದಾಸಿಯರು ಬಂದು ಮಹಾದೇವಿಯನ್ನು ಸುತ್ತುವರಿದು ಕರೆದೊಯ್ಯತೊಡಗಿದರು.

ದಾಸಿಯರ ಮಧ್ಯದಲ್ಲಿ ನಡೆಯುತ್ತಿದ್ದ ಮಹಾದೇವಿಯ ರೂಪಸಂಪತ್ತನ್ನು ನೋಡುತ್ತಾ ಕೌಶಿಕ, ತನ್ನ ಕಣ್ಣುಗಳು ಧನ್ಯವಾದುವೆಂದುಕೊಂಡ. ಆನಂದನೀಯವಾದ ಇಂತಹ ಸೌಂದರ್ಯದ ಸಾನಿಧ್ಯವೇ ತನಗೆ ಸಾರ್ಥಕತೆಯನ್ನು ತಂದುಕೊಟ್ಟಿತೆಂದು ಭಾವಸಿದ. ಒಂದಲ್ಲ ಒಂದು ದಿನ ಇದನ್ನು ಪಡೆದು ಆನಂದಿಸುವ ಭಾಗ್ಯ ಬಂದೇ ಬರುತ್ತದೆಂದು ಕನಸು ಕಟ್ಟಿದ.

`ನನ್ನ ಸೌಂದರ್ಯ ದೈಹಿಕ ಸುಖವನ್ನು ಕೊಡಲಾರದು ; ಮತ್ತು ದೈಹಿಕ ಸುಖವನ್ನು ಪಡೆಯಲಾರದು' ಎಂಬ ಅವಳ ಮಾತುಗಳು ಅವನ ಮುಂದೆ ಸುಳಿದವು.

`ರೂಪವತಿಯಾದ ತರುಣಿಯಿಂದ ಬಂದ ಮಾತುಗಳೇ ಇವು ! ಸ್ತ್ರೀ ಇಂತಹ ಮಾತನ್ನಾಡುವುದು ಸಾಧ್ಯವೇ? ಪಾಪ ! ಯಾವುದೋ ಭಾವುಕತೆಯಲ್ಲಿ ಆ ಮಾತುಗಳನ್ನು ಆಡಿದ್ದಾಳೆ. ಒಂದೆರಡು ದಿನದ ಅರಮನೆಯ ವಿಲಾಸ ಜೀವನ, ಅವಳಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ' ಎಂದು ಮುಂತಾಗಿ ಕೌಶಿಕನ ಆಲೋಚನೆ ಹರಿಯಿತು.

7

ಇತ್ತ ಮಹಾದೇವಿಯನ್ನು ಕರೆದೊಯ್ದ ಸೇವಕಿಯರು ಅರಮನೆಯ ಅಂತಃಪುರದಲ್ಲಿ ಅತ್ಯುತ್ತಮವಾಗಿ ಅಲಂಕರಿಸಿ, ಅವಳಿಗಾಗಿ ಏರ್ಪಡಿಸಿದ್ದ ವಿಭಾಗಕ್ಕೆ ಕರೆದುಕೊಂಡು ಹೋದರು. ರಾಜ್ಯೋದ್ಯಾನಕ್ಕೆ ಹತ್ತಿರದಲ್ಲಿಯೇ ಇರುವ ಅಂತಃಪುರದ ಕೊನೆಯ ಭಾಗದಲ್ಲಿ, ಮಹಾದೇವಿಗಾಗಿ ಸಿದ್ಧಗೊಳಿಸುವಂತೆ ಕೌಶಿಕ ಆಣತಿಯನ್ನಿತ್ತಿದ್ದ. ಅಂತೆಯೇ ಆ ಅಂತಃಪುರದ ಸುಸಜ್ಜಿತವಾಗಿ, ಮಹಾದೇವಿಯನ್ನು ಕಾಯುತ್ತಿತ್ತು.