ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨

ಕದಳಿಯ ಕರ್ಪೂರ

ಅದೇ ಉದ್ಗಾರದಿಂದ ಒಂದು ವಚನವೂ ರೂಪುಗೊಂಡಿತು :

ಕಲ್ಲ ಹೊಕ್ಕರೆ ಕಲ್ಲ ಬರಿಸಿದೆ ; ಗಿರಿಯ ಹೊಕ್ಕರೆ ಗಿರಿಯ ಬರಿಸಿದೆ ;

ಭಾಪು ಸಂಸಾರವೇ ! ಬೆನ್ನಿಂದ ಬೆನ್ನಹತ್ತಿ ಬಂದೆ ;

ಚೆನ್ನಮಲ್ಲಿಕಾರ್ಜುನಯ್ಯ ಇನ್ನೇವೆನಿನ್ನೇವೆ.

ಅದನ್ನು ಬರೆದಳು. ಮತ್ತೆ ಮತ್ತೆ ಓದಿದಳು. ಮಾಯೆಯ ಬಲವತ್ತರವಾದ ಶಕ್ತಿಯನ್ನು ನೆನೆದಳು. ಮತ್ತೊಂದು ವಚನ ಹಾಡಿದಳು :

ಎನ್ನ ಮಾಯದ ಮದವ ಮುರಿಯಯ್ಯ

ಎನ್ನ ಕಾಯದ ಕತ್ತಲೆಯ ಕಳೆಯಯ್ಯ ;

ಎನ್ನ ಜೀವದ ಜಂಜಡವ ಮಾಣಿಸಯ್ಯ

ಎನ್ನ ದೇವ ಚೆನ್ನಮಲ್ಲಿಕಾರ್ಜುನ ದೇವಯ್ಯ,

ಎನ್ನ ಸುತ್ತಿದ ಪ್ರಪಂಚವ ಬಿಡಿಸು ನಿಮ್ಮ ಧರ್ಮ,

`ನಿಜ. ಪ್ರಪಂಚ ನನ್ನ ಸುತ್ತಿದೆ. ನಾನು ಬೇಡವೆಂದರೂ ಅದು ಬಂದು ಸುತ್ತುತ್ತಿದೆ. ಸ್ತ್ರೀಯ ಮುಂದೆ ಅದು ಪುರುಷನಾಗಿ ಕಾಡುತ್ತಿದೆ. ಪುರುಷನ ಮುಂದೆ ಅದು ಸ್ತ್ರೀಯಾಗಿ ಕಾಡುತ್ತಿದೆ. ಲೋಕಮಾರ್ಗಕ್ಕೆ ಇದೇ ಸಹಜವಾದುದು. ಇದಕ್ಕೆ ಅತೀವವಾಗಿ ನಡೆಯುವ ಮಾರ್ಗ, ಲೋಕಕ್ಕೆ ಮರುಳಾಗಿ ತೋರಬಹುದು' ಎಂದು ತನ್ನ ದೌರ್ಬಲ್ಯವನ್ನು ಮೆಟ್ಟಿ ಮೇಲೇರುತ್ತಿರುವ ಅವಳ ಸಾಹಸದಲ್ಲಿ ಇನ್ನೊಂದು ವಚನ ಉಣ್ಮಿತು :

ಪುರುಷನ ಮುಂದೆ ಮಾಯೆ, ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ !

ಸ್ತ್ರೀಯ ಮುಂದೆ ಮಾಯೆ, ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ !

ಲೋಕವೆಂಬ ಮಾಯೆಗೆ ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ !

ಚೆನ್ನಮಲ್ಲಿಕಾರ್ಜುನನೊಲಿದಶರಣಂಗೆ ಮಾಯೆ ಇಲ್ಲ, ಮರಹಿಲ್ಲ,

ಅಭಿಮಾನವೂ ಇಲ್ಲ.

ವಚನದ ಕೊನೆಯ ಮಾತು ಅವಳಿಗೆ ತುಂಬಾ ಹಿಡಿಸಿತು. ಇದೇ ತನ್ನ ನಿಜವಾದ ಸ್ವರೂಪವೆನ್ನಿಸಿತು ಆಕೆಗೆ. `ನನಗೆ ಮಾಯೆ ಇಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ' ಎಂದುಕೊಂಡಳು.

`ಆದರೆ ಒಮ್ಮೆ ನೀನೂ ಹೇಳಿಕೊಳ್ಳಲಿಲ್ಲವೇ ಇಂತಹ ಸುಸಂಸ್ಕೃತ ರಾಜನನ್ನು ಮದುವೆ ಏಕಾಗಬಾರದೆಂದು ? ಅದು ಮನಸ್ಸಿನ ಸಹಜ ಪ್ರವೃತ್ತಿಯಲ್ಲವೇ ?' ಎಂದು ಕೇಳುವುದು ಒಂದು ಮನಸ್ಸು.

`ಅಲ್ಲ, ಮನಸ್ಸಿನ ಸಹಜಪ್ರವೃತ್ತಿಯಲ್ಲ, ಅದು ವಿಕಾರವೃತ್ತಿ. ಅಂತರಂಗದ