ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರ

೧೩೭

ಈ ಅಘಾತವನ್ನೆದುರಿಸಲಾರದೆ, ``ಮಹಾದೇವಿ, ಮಹಾದೇವಿ ? ಎಂದು ಕುಸಿದು ಕುಳಿತ ಕೌಶಿಕ.

``ಮುಗಿಯಿತೆ ? ನನ್ನ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ನಾನಿನ್ನು ಹೊರಡಲೇ? ಇನ್ನು ನಾನು ಸ್ವತಂತ್ರಳು. ಯಾವ ಶಕ್ತಿಯೂ ನನ್ನನ್ನು ತಡೆಯಲಾರದು ಎಂದು ಹೊರಟಳು ಮಹಾದೇವಿ. ಅವಳ ಸೆರಗು ಕೌಶಿಕನ ಕೈಯಲ್ಲಿಯೇ ಇತ್ತು.

ಕೌಶಿಕ ಮೇಲೇಳುತ್ತಾ : ``ಮಹಾದೇವಿ, ಮಹಾದೇವಿ... ನಿನ್ನ ಸೀರೆ ಇಲ್ಲಿಯೇ ಇದೆ ಎಂದ.

``ಅದನ್ನು ನೀನೇ ಇಟ್ಟುಕೋ. ಇನ್ನು ಅದರ ಹಂಗು ನನಗಿಲ್ಲ. ನಿನ್ನಂತಹ ಹುಚ್ಚುಗಳಿಗೆ ಸಾರಿಕೊಂಡು ಹೋಗುತ್ತೇನೆ, ಈ ದೇಹದಲ್ಲಿ ಏನಿದೆಯೆಂಬುದನ್ನು. ಇನ್ನು ನನಗೆ ದಿಗಂಬರವೇ ದಿವ್ಯಾಂಬರ ಎಂದು ಆವೇಶಗೊಂಡವಳಂತೆ ಅಲ್ಲಿಂದ ಹೊರಗೆ ನಡೆದಳು.

ಪೂಜಾಗೃಹವನ್ನು ದಾಟಿ ಹೊರಗೆ ಬಂದ ಮಹಾದೇವಿಯನ್ನು ಕಂಡ ದಾಸಿಯರಿಗೆಲ್ಲಾ ಗರಹೊಡೆದಂತಾಯಿತು. ಅರಮನೆಯೆಲ್ಲಾ ಬೆಚ್ಚಿಬಿದ್ದಿತು. ಹೌಹಾರಿತು. ಕೆಲವರಿಗಂತೂ ಮೂರ್ಛೆಹೋದಂತಾಯಿತು. ಯಾವುದರ ಪರಿವೆಯೂ ಇಲ್ಲದೆ, ದೈವಾವೇಶದ ದೈತ್ಯಶಕ್ತಿಯಂತೆ ಮಹಾದೇವಿ ಮುಂದೆ ನುಗ್ಗುತ್ತಿದ್ದಳು.

ಅರಮನೆಯನ್ನು ದಾಟಿ ರಸ್ತೆಗಿಳಿದಳು. ಜನಜಂಗುಳಿ ತಮ್ಮ ಕಣ್ಣನ್ನು ತಾವು ನಂಬಲಾರದೆ ಹೋದರು. ಇದೇನೋ ಬಂದಿತು ಎಂದು ಕೆಲವರು ಓಡಿಹೋದರು. ಇನ್ನು ಕೆಲವರು ಸ್ವಲ್ಪ ನಿಂತು ನೋಡಿದರು.

``ಯಾರಿವರು ?

``ಓಂಕಾರಶೆಟ್ಟಿಯ ಮಗಳು ಮಹಾದೇವಿಯಂತೆ ಕಾಣುತ್ತಿದೆಯಲ್ಲವೇ?

``ಅಯ್ಯೋ ಹೌದು, ಮೊನ್ನೆ ತಾನೆ ಅರಮನೆಗೆ ಹೋಗಿದ್ದಳಲ್ಲ

``ಛೇ ಛೇ... ಎಂತಹ ಕೆಲಸವಾಯಿತು ?

``ಏನಾಯಿತೋ ಪಾಪ !

``ಎಷ್ಟು ಚೆನ್ನಾಗಿದ್ದಳು, ಹುಚ್ಚುಗಿಚ್ಚು ಹಿಡಿಯಿತೇನ್ರಿ ?

- ಹೀಗೆಲ್ಲಾ ಮಾತುಗಳು ನಡೆಯುತ್ತಿದ್ದವು. ಮನೋವೇಗದಿಂದ ಸುದ್ದಿ ಊರೆಲ್ಲಾ ಹಬ್ಬಿತು.