ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬

ಕದಳಿಯ ಕರ್ಪೂರ

``ನಾನೆ ? - ನಾನು ಯಾರೆಂದು ಹೇಳಲಿ, ಅಣ್ಣ. ನಾನೊಬ್ಬಳು ಸಾಧಕಿಯೆಂದು ಹೇಳಿದರೆ ಸಾಕೆ ? ಚೆನ್ನಮಲ್ಲಿಕಾರ್ಜುನನ್ನು ಹುಡುಕಿಕೊಂಡು ಕಲ್ಯಾಣದ ಕಡೆ ಹೊರಟಿದ್ದೇನೆ. ಬಿಸಿಲು ಹೆಚ್ಚಾದುದರಿಂದ ಈ ನೆರಳಿನಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆಯುತ್ತಿದ್ದೆ, ನಾನಿನ್ನು ಬರುತ್ತೇನೆ ಎಂದು ಅಲ್ಲಿಂದ ಹೊರಡಲು ಉದ್ಯುಕ್ತಳಾದಳು ಮಹಾದೇವಿ.

ಆತನೇ ಮತ್ತೆ ಹೇಳಿದ : ``ಇನ್ನೂ ಬಿಸಿಲು ಸುರಿಯುತ್ತಿದೆ ತಂಗಿ. ಇಲ್ಲಿಗೆ ಸ್ವಲ್ಪ ದೂರದಲ್ಲೇ ನನ್ನ ಮನೆಯಿದೆ, ಅಲ್ಲಿ ಹೋಗೋಣ. ಈ ಬಡವನ ಮನೆಯ ಆತಿಥ್ಯವನ್ನು ಸ್ವೀಕರಿಸಿ ಮುಂದೆ ಹೋಗಬಹುದು ನಡೆಯಮ್ಮ.

``ಕ್ಷಮಿಸಿರಿ, ಯಾರ ಆತಿಥ್ಯವನ್ನೂ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ನೀವು ನನಗೆ ಮುಂದಿನ ಮಾರ್ಗವನ್ನು ತಿಳಿಸಿದರೆ ಎಲ್ಲಕ್ಕಿಂತ ಹೆಚ್ಚಿನ ಉಪಕಾರವನ್ನು ಮಾಡಿದಂತೆ. ಈ ಮಾರ್ಗ ಮುಂದೆ ಎಲ್ಲಿಗೆ ಹೋಗುತ್ತದೆ ತಿಳಿಸುತ್ತೀರಾ ? ಕಲ್ಯಾಣದ ಕಡೆಗೆ ಇದು ಕೊಂಡೊಯ್ಯುತ್ತದೆಯೆ ? ಮಹಾದೇವಿ ಕೇಳಿದಳು ಆತನನ್ನು.

``ಕಲ್ಯಾಣದ ಮಾತನ್ನು ನಾನರಿಯೆ, ತಾಯಿ. ಈ ದಾರಿಯಲ್ಲಿ ಹಾನಗಲ್ಲವರೆಗೂ ನಾನು ಹೋಗಿದ್ದೇನೆ. ಹೀಗೆ ನೇರವಾಗಿ ಹೋದರೆ ಮುಂದೆ ಇದು ಉತ್ತರಕ್ಕೆ ತಿರುಗುತ್ತದೆ. ಅದೇ ಹಾನಗಲ್ಲಿಗೆ ಹೋಗುವ ದಾರಿ. ಇಲ್ಲಿಂದ ಒಂದೆರಡು ಹರದಾರಿ ಹೋಗುವುದರೊಳಗಾಗಿ ಭಯಂಕರವಾದ ಕಾಡು ಸಿಕ್ಕುತ್ತದೆ. ಕಣಿವೆಯ ದಾರಿ ಅದು. ಒಂದು ಗುಡ್ಡವನ್ನು ಹತ್ತಿ ಇಳಿಯಬೇಕು. ಕಾಡನ್ನು ದಾಟಿದ ಕೂಡಲೇ ಆ ಗುಡ್ಡದ ಆಚೆಯ ತಪ್ಪಲಿನಲ್ಲಿ ಒಂದು ಊರಿದೆ. ಅಲ್ಲಿಂದ ಮುಂದೆ ಅದೇ ದಾರಿಯಲ್ಲಿ ಮತ್ತೆ ನೇರವಾಗಿ ನಡೆದರೆ ಹಾನಗಲ್ಲು ಸಿಕ್ಕುತ್ತದೆ. ಬಹಳ ದೂರದ ಹಾದಿಯಮ್ಮ ಅದು ತನಗೆ ತಿಳಿದಷ್ಟನ್ನು ವಿವರಿಸಿದ ಆತ.

``ತುಂಬಾ ವಂದನೆಗಳು ಅಣ್ಣಾ. ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನಾನು ಬರುತ್ತೇನೆ - ಎಂದು ಹೇಳುತ್ತಾ ಹೊರಟೇಬಿಟ್ಟಳು ಮಹಾದೇವಿ. ಏನು ಹೇಳುವುದಕ್ಕೂ ತೋಚದೆ ಈ ನಾಲ್ವರೂ ಅಲ್ಲಿಯೇ ನಿಂತು ಅವಳನ್ನೇ ನೋಡುತ್ತಿದ್ದರು.