ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮

ಕದಳಿಯ ಕರ್ಪೂರ

ಒಂದು ಕಡೆ ಕೋಗಿಲೆ ಕುಹೂ ಎಂದರೆ, ಇನ್ನೊಂದು ಕಡೆಯಿಂದ ಸಿಳ್ಳು ಹಕ್ಕಿಯ ದೀರ್ಘವಾದ ನಾದ ಕೇಳಿಬರುತ್ತಿತ್ತು. ಮತ್ತೊಂದು ಕಡೆಯಲ್ಲಿ ಗಿಳಿಗಳು ಮಾತನಾಡುವಂತೆ ತೋರುತ್ತಿದ್ದವು. ದೂರದಲ್ಲೆಲ್ಲೋ ಒಂದು ರೀತಿಯ ದೀರ್ಘವಾದ ಕೂಜನ ಕೇಳಿಬರುತ್ತಿತ್ತು. ಬಹುಶಃ ಅದು ನವಿಲಿನದಿರಬೇಕೆಂದುಕೊಂಡಳು ಮಹಾದೇವಿ.

ಕಾಡಿನ ಸೌಂದರ್ಯವನ್ನು ಸವಿಯುತ್ತಾ ಮಹಾದೇವಿ ಮುಂದುವರಿಯುತ್ತಿದ್ದಳು : ಮೇಲುಮೇಲಕ್ಕೇರತೊಡಗಿದಳು. ಗುಡ್ಡದ ತುದಿಗೆ ಬರುವ ವೇಳೆಗೆ ದೇಹ ಆಯಾಸಗೊಂಡಿದ್ದರೂ, ವಯಸ್ಸಿನ ಉಲ್ಲಾಸ ಅದನ್ನು ತೊಡೆದುಹಾಕಿ ಚೈತನ್ಯವನ್ನು ಕೊಟ್ಟಂತಿತ್ತು.

ಕೆಳಗಡೆ ಕಣಿವೆಯಲ್ಲಿ ಬೆಳೆದುನಿಂತ ಮರಗಿಡಗಳು, ಹಸುರಿನ ಹೊಳೆಯಂತೆ ಸಾಲುಸಾಲಾಗಿ ಹರಡಿದ್ದುವು. ದೂರದ ಇನ್ನೊಂದು ಗುಡ್ಡದ ಮರೆಯನ್ನು ಅವಲಂಬಿಸುವಂತೆ ಸೂರ್ಯ ಅತ್ತ ಇಳಿಯುತ್ತಿದ್ದ. ಸಂಜೆಯ ಹೊಂಬೆಳಗಿನ ಅವನ ಕಿರಣಗಳು ಹಸಿರು ಪ್ರವಾಹವನ್ನು ತಾಗಿ ಪಚ್ಚೆಯ ರತ್ನಕ್ಕೆ ಚಿನ್ನದ ಮೆರುಗನ್ನು ಕೊಟ್ಟಂತೆ ಹೊಳೆಯುತ್ತಿತ್ತು.

ಸಂಜೆಯೊಳಗಾಗಿ ಗುಡ್ಡವನ್ನು ಇಳಿಯಬೇಕೆಂಬ ಆತುರ ಮಹಾದೇವಿಗಿದ್ದರೂ ಒಂದು ಕ್ಷಣಕಾಲ ಆ ಗುಡ್ಡದ ನೆತ್ತಿಯ ಮೇಲೆ ಕುಳಿತುಕೊಳ್ಳಬೇಕೆನಿಸಿತು. ಅಲ್ಲಿ ಕುಳಿತು ಸುತ್ತಲೂ ನೋಡಿದಳು :

ಈ ಒಂದು ಚಿಕ್ಕ ಗುಡ್ಡವೇ ಇಂತಹ ಪ್ರಕೃತಿ ಸೌಂದರ್ಯವನ್ನೊಳಗೊಂಡಿದೆ. ಇನ್ನು ಆ ಶ್ರೀಶೈಲದ ಮಲ್ಲಿಕಾರ್ಜುನನ ಸುತ್ತ ಎಂತಹ ಸೌಂದರ್ಯದ ತೋರಣವನ್ನು ಕಟ್ಟಿದ್ದಾಳೆಯೋ ಪ್ರಕೃತಿ ಮಾತೆ - ಎನ್ನುತ್ತಾ ಗುರುಲಿಂಗರಿಂದ ತಾನು ಕೇಳಿದ್ದ ಶ್ರೀಶೈಲದ ಚಿತ್ರವನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದಳು.

ಶ್ರೀಶೈಲದ ಸ್ಮರಣೆಯಿಂದ, ಅವಳ ಮನಸ್ಸು ಉದ್ವೇಗಗೊಂಡಿತು :

`ಅಲ್ಲಿರುವ ಮಲ್ಲಯ್ಯ ಇಲ್ಲಿಯೂ ಇಲ್ಲವೇ ? ನನಗೇಕೆ ಮುಖ ತೋರಿಸನು? ಚೆನ್ನಮಲ್ಲಿಕಾರ್ಜುನಾ ನೀನು ಸರ್ವಭರಿತವಾಗಿ ನನಗೇಕೆ ಮುಖವನ್ನು ತೋರಿಸಲೊಲ್ಲೆ ? ನಿನಗಾಗಿ ಹಂಬಲಿಸಿ ಹಲುಬುತ್ತಾ ಹೊರಟಿರುವ ನನ್ನನ್ನು ನೀನೇಕೆ ಕಾಣಲೊಲ್ಲೆ ? ಎಲ್ಲಿ ಅಡಗಿಕೊಂಡಿರುವೆ ? ಇದೇ ಶ್ರೀಗಿರಿಯೆಂದು ಭಾವಿಸಿ ಇಲ್ಲಿಯೇ ನೀನು ಮೈದೋರಬಾರದೇ... ಎಂದು ಮುಂತಾಗಿ ಮೊರೆಯಿತು ಅವಳ ಮನಸ್ಸು.