ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮

ಕದಳಿಯ ಕರ್ಪೂರ

ಮರುಕ್ಷಣದಲ್ಲಿಯೇ ಮನಸ್ಸು ನುಡಿಯುವುದು :

`ನೀನೇಕೆ ಏಕಾಂಗಿನಿ ? ಕಲ್ಯಾಣದ ಅಣ್ಣನ ಮಹಾ ಬಳಗವನ್ನು ಸೇರಲು ಹೊರಟಿದ್ದೀಯ'

ಈ ಸ್ಮರಣೆಯೇ ಅವಳಿಗೆ ಹೊಸ ಚೈತನ್ಯವನ್ನು ತುಂಬುವುದು. ಹೆಜ್ಜೆ ಹೆಜ್ಜೆಗೂ ಕಲ್ಯಾಣ ಹತ್ತಿರವಾಗುತ್ತಿದೆಯೆಂಬ ಸಂತೋಷದ ಸ್ಮರಣೆಯ ಮಂತ್ರವನ್ನು ಜಪಿಸುತ್ತಾ ಮುಂದೆ ನಡೆಯುತ್ತಿದ್ದಳು.

ಆ ದಿನವೆಲ್ಲಾ ನಡೆದು ಸಂಜೆಯ ವೇಳೆಗೆ ಒಂದು ಹಳ್ಳಿಯನ್ನು ತಲುಪಿದಳು. ಅಲ್ಲಿ ಅವಳ ಬರವನ್ನೇ ಕಾಯುತ್ತಿದ್ದಂತೆ ನಿಂತಿದ್ದ ಇಬ್ಬರು ಜಂಗಮರು ಅವಳನ್ನು ಎದುರುಗೊಂಡು ಆ ಹಳ್ಳಿಯಲ್ಲಿರುವ ಚಿಕ್ಕ ಮಠವೊಂದಕ್ಕೆ ಕರೆದೊಯ್ದರು. ಅಲ್ಲಿ ರಾತ್ರಿ ಮಹಾದೇವಿಯ ಊಟ - ವಸತಿಯ ವ್ಯವಸ್ಥೆಯಾಯಿತು.

ಅಲ್ಲಿಂದ ಕೇವಲ ಒಂದು ಅರ್ಧದಿನದ ದಾರಿ ಕಲ್ಯಾಣಕ್ಕೆ ಎಂಬುದನ್ನು ಮಹಾದೇವಿ ಕೇಳಿ ತಿಳಿದಳು. ಆ ರಾತ್ರಿಯೆಲ್ಲಾ ಕಲ್ಯಾಣದ ಕನಸಿನಲ್ಲಿಯೇ ಕಳೆದಳು. ಬೆಳಿಗ್ಗೆ ಅಷ್ಟುಹೊತ್ತಿಗೆ ಎದ್ದು ಮತ್ತೆ ಪ್ರಯಾಣವನ್ನು ಮುಂದುವರಿಸಿದಳು.

ಗುರಿಯನ್ನು ಸೇರುವ ತೃಪ್ತಿ ಸಂತೋಷಗಳು ಇದುವರೆಗಿನ ಆಯಾಸವನ್ನೆಲ್ಲಾ ಮರೆಸಿದ್ದುವು. ಮಧ್ಯಾಹ್ನದ ಬಿಸಿಲು ಕೂಡ ಇಂದು ಅವಳಿಗೆ ತಂಪಾಗಿತ್ತು. ಹೊತ್ತು ಸ್ವಲ್ಪ ಇಳಿಮುಖವಾಗುತ್ತಿರುವ ವೇಳೆಗೆ ಕಲ್ಯಾಣಪಟ್ಟಣ ಅವಳ ಕಣ್ಣಿಗೆ ಬಿತ್ತು. ದಾರಿಯಲ್ಲಿ ಎದುರಿಗೆ ಬರುತ್ತಿರುವವರಿಂದ ಕೇಳಿ ತಿಳಿದಳು ಅದೇ ಕಲ್ಯಾಣವೆಂಬುದನ್ನು. ಊರು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮರಗಿಡಗಳಿಂದ ಆವೃತ್ತವಾಗಿದ್ದ ಆ ಸ್ಥಳ, ಊರಿನ ದಿಕ್ಸೂಚನೆಯನ್ನು ಕೊಡುವಂತಿತ್ತು.

ಬಸವಣ್ಣನ ಭಕ್ತಿಯ ಬೆಳಸಿನ ರಕ್ಷಣೆಗೆಂಬಂತೆ ಎತ್ತರವಾಗಿ ತಲೆಯೆತ್ತಿ ನಿಂತಿದ್ದ ರಾಜಧಾನಿಯ ಕೋಟೆಯ ಗೋಡೆ ಮಾತ್ರ ಕಣ್ಣಿಗೆ ಬೀಳುತ್ತಿತ್ತು.

ಮಹಾದೇವಿ ಇನ್ನೂ ಸ್ವಲ್ಪ ಮುಂದೆ ನಡೆದಳು. ಕೋಟೆಯ ಮುಂಭಾಗ ಈಗ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಮಹಾದೇವಿ ರಸ್ತೆಯ ಪಕ್ಕದಲ್ಲಿದ್ದ ಒಂದು ಸಣ್ಣ ದಿಣ್ಣೆಯನ್ನೇರಿದಳು. ಗೋಡೆಯನ್ನು ಭೇದಿಸಿಕೊಂಡು ಒಳಗಿರುವ ಬಸವನೆಂಬ ಜ್ಯೋತಿಯನ್ನು ನೋಡಲು ಹವಣಿಸುವ ದಿವ್ಯ ದೃಷ್ಟಿಯೋ ಎಂಬಂತೆ ನಟ್ಟಾಲಿಯಿಂದ ಅತ್ತಲೇ ದಿಟ್ಟಿಸಿ ನೋಡುತ್ತಾ ಅಲ್ಲಿ ಕುಳಿತುಕೊಂಡಳು.