ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨

ಕದಳಿಯ ಕರ್ಪೂರ

ಆದರೆ ಇದು ಹೇಗೆ ಕಾಣಿಸುತ್ತದೆಂಬುದನ್ನು ನಾನು ಬಲ್ಲೆ. ಏಕೆಂದರೆ ನಾನು ಅದೇ ದೃಷ್ಟಿಯಿಂದ ಹಿಂದೆ ಅವುಗಳನ್ನು ನೋಡುತ್ತಿದ್ದವನು. ಆದರೆ ಈಚೆಗೆ ನನ್ನ ಕಣ್ಣು ತೆರೆಯಿತು. ಹಾಗೆಯೇ ಇತರರ ಕಣ್ಣೂ ತೆರೆಯಬಾರದೇ, ಸಮಾಜದಲ್ಲಿ ಚಿಮ್ಮುತ್ತಿರುವ ಈ ಹೊಸ ಬೆಳಕನ್ನು ಸ್ವಾಗತಿಸುವಂತಾಗಬಾರದೇ ಎಂದು ಹಂಬಲಿಸುತ್ತಿದ್ದೇನೆ.

``ಸಂತೋಷ ಮಧುವರಸರೇ ! ಬಸವಣ್ಣ ಆತನತ್ತ ನೋಡುತ್ತಾ ಹೇಳಿದ : ``ನಿಮ್ಮ ಹಂಬಲ ವ್ಯರ್ಥವಾಗಲಾರದು. ಇಂದಲ್ಲ ನಾಳೆ ಸಮಾಜ ಅದನ್ನು ಕಂಡುಕೊಳ್ಳುತ್ತದೆ. ಈ ಭಾವನೆಗಳನ್ನು ನಾವು ಇಂದು ಬಿತ್ತಿದರೆ, ಅವು ಎಂದೋ ಒಂದು ದಿನ, ಯಾವುದೋ ಒಂದು ಮನಸ್ಸನ್ನು ಹೊಕ್ಕು ಬೆಳೆದು ಫಲವನ್ನು ಕೊಡುತ್ತವೆ. ನಿಮ್ಮಂತಹ ನಾಲ್ಕು ಜನರಿಗೆ ನನ್ನ ಈ ಭಾವನೆಗಳು ಹಿಡಿಸಿರುವುದನ್ನು ಕಂಡು, ನನಗೆ ಸಮಾಧಾನವಾಗಿದೆ. ಅದು ಹಾಗೆಯೇ ಹರಡುತ್ತಾ ಹೋಗಬೇಕೆಂಬುದೇ ನನ್ನ ಬಯಕೆ.

``ನಿಮ್ಮ ವ್ಯಕ್ತಿತ್ವದ ಪ್ರಭಾಯುತವಾದ ಪೋಷಣೆಯಿಂದ ಅದು ವಿರಾಟ್ ರೂಪವಾಗಿ ಬೆಳೆಯುತ್ತದೆಂಬ ನಂಬಿಕೆ ನನಗಿದೆ. ಮಧುವಯ್ಯ ಹೇಳಿದ.

``ನಿಜ ಮಧುವಯ್ಯ ಅಲ್ಲಮಪ್ರಭು ಮಧ್ಯದಲ್ಲಿ ಸೇರಿದ : ``ಭಕ್ತಿವಾರಿಧಿಯ ಅಂತರಾಳದಿಂದ ಸಿಡಿದ ಅಪಾರವಾದ ಶಕ್ತಿ ಈ ಬಸವಣ್ಣ. ಈತನು ಕೈಗೊಂಡ ಕಾರ್ಯ ಮುಂದುವರಿಯಬೇಕು. ಅದಕ್ಕೆ ನಿಮ್ಮೆಲ್ಲರ ಸಹಾಯವೂ ಅಗತ್ಯ"

ಅಲ್ಲಮನಿಂದ ಈ ಹೊಗಳಿಕೆಯ ಮಾತನ್ನು ಕೇಳಿ ಬಸವಣ್ಣ ಸಂಕೋಚದಿಂದ ಕುಗ್ಗಿದ. ಅತ್ತ ತಿರುಗಿ ಹೇಳಿದ :

``ತಾವೂ ಹೀಗೆ ನನ್ನನ್ನು ಸಂಕೋಚಕ್ಕೆ ಗುರಿಮಾಡಬಹುದೇ ? ನಿಮ್ಮ ಕರುಣೆಯ ಕಂದನಾದ ನನಗೆ ನಿಮ್ಮ ಕೃಪೆಯಲ್ಲದೇ ಬೇರೆ ವ್ಯಕ್ತಿತ್ವವುಂಟೇ ?

ಮಾಡುವಾತ ನಾನಲ್ಲಯ್ಯಾ ; ನೀಡುವಾತ ನಾನಲ್ಲಯ್ಯಾ ?

ಬೇಡುವಾತ ನಾನಲ್ಲಯ್ಯಾ, ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ |

ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ

ನಿನಗೆ ನೀ ಮಾಡಿಕೋ ಕೂಡಸಂಗಮದೇವಾ.

``ಈ ಮನೆಯ ತೊತ್ತು ನಾನು, ಒಡೆಯ ನೀನು. ಈ ಶರಣರೆಲ್ಲದ ಮಧ್ಯದಲ್ಲಿ

`ಮಾವಿನಕಾಯೊಳಗೊಂದು ಎಕ್ಕೆಯ ಕಾಯಿ ನಾನು !' ಅವರು ನನ್ನ ಕೈ ಹಿಡಿದು ಉದ್ಧರಿಸುವವರು. ಈ ಭಾವವೇ ನನ್ನಲ್ಲಿ ಕೊನೆಯವರೆಗೆ ಉಳಿಯುವಂತೆ ಮಾಡು ಪ್ರಭುವೇ.