``ಇದೇನು ತಾಯಿ ! ಏರುತ್ತಿರುವ ಬಿಸಿಲಿನಲ್ಲಿ ಕುಳಿತಿದ್ದೀರಿ ! ಪ್ರಭುದೇವರು ಅಲ್ಲಿ ತಮಗಾಗಿ ಚಂದಯ್ಯನನ್ನು, ಚೆನ್ನಬಸವಣ್ಣನನ್ನು ಕೇಳುತ್ತಿದ್ದರು. ಹೇಳಿದ ಅಪ್ಪಣ್ಣ.
``ಹೌದೇ ಅಪ್ಪಣ್ಣಾ ? ಪ್ರಭುದೇವರ ಪೂಜೆ ಇನ್ನೂ ಮುಗಿದಿಲ್ಲವೆಂದು ಇಲ್ಲಿ ಕುಳಿತಿದ್ದೆ. ಹೋಗುತ್ತೇನೆ ಅವರ ಬಳಿಗೆ ಎನ್ನುತ್ತಾ ಮಹಾದೇವಿ ಮಹಡಿಯನ್ನು ಇಳಿಯತೊಡಗಿದಳು.
2
ಮಹಾದೇವಿ ಅಲ್ಲಮನ ಕೊಠಡಿಯನ್ನು ಪ್ರವೇಶಿಸಿದಾಗ ಪ್ರಭುದೇವನೊಡನೆ ಬಸವಣ್ಣನೂ ಕುಳಿತಿರುವುದನ್ನು ಕಂಡಳು. ``ಅರಮನೆಗೆ ಹೋಗಲಿಲ್ಲವೇ ಅಣ್ಣ?
``ಇಲ್ಲ ಮಹಾದೇವಿ, ಇಂದು ಸ್ವಲ್ಪ ಬಿಡುವು, ಸಂಜೆಗೆ ಬಂದು ನೋಡುತ್ತೇನೆಂದು ಮಹಾರಾಜರಿಗೆ ಹೇಳಿಕಳುಹಿಸಿದ್ದೇನೆ. ಹೇಳಿದ ಬಸವಣ್ಣ.
``ಆ ಮಂಚಣ್ಣನೇನೂ ಮತ್ತೆ ಹಂಚಿಕೆ ಹಾಕುತ್ತಿಲ್ಲವಷ್ಟೇ ? ನಗುತ್ತಾ ಕೇಳಿದಳು ಮಹಾದೇವಿ. ಅಣ್ಣನು ಅರಮನೆಯಲ್ಲಿ ಕೊಂಡೆಯ ಮಂಚಣ್ಣ ಮೊದಲಾಗಿ ಚಾಡಿಕೋರರಿಂದ ಎದುರಿಸಬೇಕಾಗಿರುವ ಸಮಸ್ಯೆಗಳ ವಿಷಯ ಅವಳಿಗೂ ಸ್ವಲ್ಪ ಮಟ್ಟಿಗೆ ತಿಳಿದಿತ್ತು.
``ಅಂತಹವರೂ ಇರಬೇಕು ಮಹಾದೇವಿ. ನಾವು ಸದಾ ಜಾಗೃತರಾಗಿದ್ದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಅಂತಹವರು ಅಗತ್ಯ... ಅದಿರಲಿ ಮಹಾದೇವಿ, ನಿನ್ನ ಸಾಧನೆಯ ನಿಲವನ್ನು ಪ್ರಭುದೇವರು ಹೇಳಿದರು. ಕಲ್ಯಾಣ ಧನ್ಯವಾಯಿತು ತಾಯಿ, ನಿನ್ನಿಂದ ಮೆಚ್ಚಿ ಉದ್ಗರಿಸಿದ ಬಸವಣ್ಣ.
``ನೀವು ಅಂತಹ ಮಾತನ್ನು ಹೇಳಬಾರದು ಅಣ್ಣಾ ಎನ್ನುತ್ತಾ ಮಹಾದೇವಿ ಪ್ರಭುದೇವರ ಕಡೆ ನೋಡಿದಳು.
ಮಹಾದೇವಿಯ ಮಧುರಭಕ್ತಿ ಬಸವಣ್ಣನಂತೆಯೇ ಗುರುಲಿಂಗ ಜಂಗಮ ದಾಸೋಹದ ಮಾರ್ಗದಲ್ಲಿಯೇ ಮುಂದುವರೆಯುತ್ತಿತ್ತು. ಅತಿ ವೇಗವಾಗಿ ಊರ್ಧ್ವಮುಖಗಮನದಿಂದ ಮೇಲೇರುತ್ತಿತ್ತು.
ಪ್ರಭುವಿನ ರಕ್ಷಣೆಯಿಂದ ಯೋಗಮಾರ್ಗದಲ್ಲಿಯೂ ಮುನ್ನಡೆಯುತ್ತಿದ್ದಳು. ಅವಳಲ್ಲಿರುವ ಅದ್ಭುತವಾದ ಶಕ್ತಿಯನ್ನು ಕಂಡು ಪ್ರಭುದೇವ ಅದಕ್ಕನುಗುಣವಾದ ಮಟ್ಟದಲ್ಲಿ ಶಿವಯೋಗದ ರಹಸ್ಯವನ್ನು ತಿಳಿಸಿಕೊಡುತ್ತಿದ್ದ. ಸತಿಪತಿಭಾವದ ಅವಳ ಮಧುರಭಕ್ತಿ ಪ್ರಾಣಲಿಂಗಸ್ಥಲದ ಅನುಭಾವದೊಡನೆ ಸಮನ್ವಿತವಾಗಿ