ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೫೫

ಪ್ರಾರಂಭವಾಗುತ್ತಿತ್ತು ಆ ಕಲ್ಲಿನ ಅಂಚಿನಿಂದ. ಅಲ್ಲಿ ನಿಂತು ಕೆಳಗೆ ನೋಡಿದರೆ ಆಳವಾದ ಕಮ್ಮರಿಯ ಕಾಣಲಾಗದ ತಳ ಕಣ್ಣಿಗೆ ಬೀಳುತ್ತಿತ್ತು. ಆ ಕಲ್ಲಿನ ಅಂಚಿನಿಂದ ಒಂದು ಹೆಜ್ಜೆ ಮುಂದಿಟ್ಟರೆ ಅತ್ತ ಇತ್ತ ತಾಗದೆ ನೇರವಾಗಿ ಪಾತಾಳವನ್ನು ಸೇರುತ್ತಿತ್ತು ದೇಹ.

ಮಹಾದೇವಿ ಧೈರ್ಯ ಮಾಡಿ ತುದಿಗೆ ಹೋಗಿ ಬಗ್ಗಿ ನೋಡಿದಳು. ಕೆಳಗೆ ನೆಲವೇ ಕಾಣದಷ್ಟು ಆಳವಾಗಿದ್ದಂತೆ ತೋರಿತು ಕಮ್ಮರಿ. ಕಣ್ಣಿಗೆ ಕತ್ತಲೆ ಬಂದಂತಾಯಿತು. ಹಾಗೆಯೇ ಹಿಂದಕ್ಕೆ ಸರಿದಳು. ಪ್ರಕೃತಿ ನಿರ್ಮಿತವಾದ ಭವ್ಯಭಯಂಕರ ಪವಾಡದಂತೆ ತೋರಿತು ರುದ್ರಗಮ್ಮರಿ.

ಸಿದ್ಧರಾಮ ಅದರ ತುದಿಯಲ್ಲಿ ನಿಂತು ಕಣ್ಣುಮುಚ್ಚಿ ಕೆಳಗೆ ಬೀಳಲು ಹೋದಾಗ ಅವನ ಮನಸ್ಸಿನ ಕಮ್ಮರಿಯಲ್ಲಿ ಶಿವ ಮೂಡಿದ. ಅದರಿಂದ ಇಡೀ ರುದ್ರಗಮ್ಮರಿಯನ್ನೇ ಶಿವ ತುಂಬಿ ತುಳುಕಿದಂತಹ ಅನುಭವವಾಯಿತು ಸಿದ್ಧರಾಮನಿಗೆ. ಜೀವನದ ಸಾರ್ಥಕತೆಯ ರಹಸ್ಯ ಮಿಂಚಿನಂತೆ ಹೊಳೆಯಿತು. ಧ್ರುವನಕ್ಷತ್ರದಂತೆ ಸ್ಥಿರವಾಯಿತು.

ಇದನ್ನೆಲ್ಲಾ ಸಿದ್ಧರಾಮನ ಬಾಯಿಂದ ಕೇಳಿದ್ದಳು ಮಹಾದೇವಿ. ಅದನ್ನು ಈಗ ನೆನಪಿಸಿಕೊಳ್ಳುತ್ತಿದ್ದಳು :

‘ನಿಜ, ಇಂತಹ ಭವ್ಯವಾದ ಪ್ರಕೃತಿ ವಿಗ್ರಹದ ನಗ್ನ ಸೌಂದರ್ಯದ ಎದುರಿನಲ್ಲಿ ಮಾನವನ ಅಲ್ಪತೆ ಅಳಿದು ಅರಿವಿಗೆ ಮೀರಿದ ಆನಂದ, ಮಿಂಚಿನ ಪರ್ವತದಂತೆ ಬೆಳೆದು ನಿಂತರೆ ಆಶ್ಚರ್ಯವಿಲ್ಲ’ ಎಂದುಕೊಂಡಳು.

ಬಹಳ ಹೊತ್ತು ಅಲ್ಲಿ ಕುಳಿತಿದ್ದು ಅನಂತರ ನಿಧಾನವಾಗಿ, ಇಳಿದ ಮಾರ್ಗದಿಂದಲೇ ಮೇಲೇರತೊಡಗಿದಳು.

ಅದರ ಸಮೀಪದಲ್ಲಿಯೇ ಸಿದ್ಧರಾಮನ ಕೊಳ. ಎತ್ತರವಾದ ಆ ಪರ್ವತ ಪ್ರದೇಶದಲ್ಲಿ ಒಂದು ಕಲ್ಲಿನ ಗುಹೆ. ಕಲ್ಲಿನಿಂದ ಅಲ್ಲಿ ನೀರು ಜಿನುಗುತ್ತಾ ಒಂದು ಸಣ್ಣ ಕೊಳವಾಗಿ ಮಾರ್ಪಟ್ಟಿತ್ತು. ಸಿದ್ಧರಾಮ ಮಲ್ಲಿಕಾರ್ಜುನನಿಗಾಗಿ ಹಂಬಲಿಸಿ ಅತ್ತನಂತೆ. ಅವನ ಪವಿತ್ರವಾದ ಕಣ್ಣೀರೇ ಜಲಾಶಯವಾಗಿ ನೆಲಸಿತಂತೆ !

ಮಹಾದೇವಿ ಒಳಗೆ ಹೋಗಿ ಆ ಪವಿತ್ರಜಲವನ್ನು ಕೈಗೆತ್ತಿಕೊಂಡಳು. ಶುಭ್ರವಾದ ತಿಳಿನೀರು ತಣ್ಣಗೆ ಕೊರೆಯುತ್ತಿತ್ತು. ಒಂದು ಗುಟುಕು ಕುಡಿದಳು. ದುಃಖದ ಕಣ್ಣೀರಿನ ಆನಂತರ ಬಂದ ಮಲ್ಲಿಕಾರ್ಜುನನ ಅನುಭವದ ಸುಖದಂತೆ ಅದು ಸಿಹಿಯಾಗಿತ್ತು.