ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೫೯

ಮತ್ತೆ ಮತ್ತೆ ಮಹಾದೇವಿಗೆ ಸೂಚನೆಗಳನ್ನು ಕೊಡುತ್ತಿದ್ದರು. ತಾವು ವೇಗವಾಗಿ ಇಳಿಯಬಲ್ಲವರಾದರೂ ಮಹಾದೇವಿಗೋಸ್ಕರ ಅತಿ ನಿಧಾನವಾಗಿ ಇಳಿಯುತ್ತಿದ್ದರು.

ಅರ್ಧದಷ್ಟು ದೂರ ಇಳಿದ ಮೇಲೆ, ಕಡಿದಾದ ಭಾಗ ಸ್ವಲ್ಪ ಕಡಿಮೆಯಾದಂತಾಯಿತು. ಕ್ರಮೇಣ ಇಳಿಜಾರಾಗಿರುವ ಜಾಗವನ್ನು ಈಗ ಇಳಿಯುತ್ತಿದ್ದರು. ಇಳಿದಷ್ಟೂ ಪರ್ವತ ಬೆಳೆಯುತ್ತಿರುವಂತೆ ತೋರುತ್ತಿತ್ತು.

ನಾಲ್ಕಾರು ಕಡೆಗಳಲ್ಲಿ ಕುಳಿತು ನಿಧಾನವಾಗಿ ಇಳಿಯುತ್ತಿದ್ದರು. ಮಹಾದೇವಿ ಆಯಾಸದಿಂದ ಏದುತ್ತಿದ್ದರೂ ಸುತ್ತಲಿನ ಸೌಂದರ್ಯವನ್ನು ನೋಡುತ್ತಾ ಸುಧಾರಿಸಿಕೊಳ್ಳುತ್ತಾ ಇಳಿಯುತ್ತಿದ್ದಳು. ಕ್ರಮೇಣ ಪರ್ವತದ ಬುಡಕ್ಕೆ ಬರುತ್ತಿರುವಂತೆ ತೋರುತ್ತಿತ್ತು. ಎದುರಿಗಿರುವುದು ಈಗ ಕಾಲುವೆಯಲ್ಲ, ನದಿಯೆಂಬ ಭಾವನೆ ಬರತೊಡಗಿತ್ತು. ಇನ್ನೂ ಹತ್ತಿರ ಹೋದಂತೆ ಕೃಷ್ಣೆಯ ಸಲಿಲದೇಹದ ಮಂಜುಳನಾದ ಅಸ್ಪಷ್ಟವಾಗಿ ಕಿವಿಗೆ ಬೀಳತೊಡಗಿತು.

ಸೂರ್ಯ ಎದುರಿಗಿರುವ ಪರ್ವತಶಿಖರದ ಮೇಲೆ ಕೆಂಪು ಚೆಂಡಿನಂತೆ ಕಾಣಿಸುತ್ತಿದ್ದ. ಆ ವೇಳೆಗೆ ಅಂತೂ ಚುಕ್ಕಲ ಪರ್ವತವನ್ನು ಇಳಿಯುವುದು ಮುಗಿಯಿತು. ಕೃಷ್ಣಾನದಿಯ ಮರಳುದಂಡೆಯ ಮೇಲೆ ಈಗ ನಡೆಯತೊಡಗಿದ್ದರು, ಚುಕ್ಕಲ ಪರ್ವತವನ್ನು ಸವೆಸಿ ಬಂದ ಸಂತೋಷದಿಂದ.

ಮರುಳುದಂಡೆಯಮೇಲೆ ಓಡುತ್ತಾ ಮಹಾದೇವಿ ನದಿಯ ಕಡೆಗೆ ನಡೆಯುತ್ತಿದ್ದಳು. ಕಲ್ಲುಬಂಡೆಗಳ ಮೇಲೆ ಅಲ್ಲಿ ನದಿ ವೇಗವಾಗಿ ಹರಿಯುತ್ತಿತ್ತು. ಮರಳನ್ನು ದಾಟಿ, ಬಂಡೆಗಳನ್ನು ನೆಗೆದು, ನೀರಿನ ಬಳಿಗೆ ಬಂದಳು ಮಹಾದೇವಿ.

ಆಕೆಗೆ ಸ್ವಾಗತವನ್ನು ಬಯಸುವಂತೆ ಕೃಷ್ಣೆ ಸಂಭ್ರಮದಿಂದ ದಡಕ್ಕೆ ಅಪ್ಪಳಿಸಿ ನೊರೆಮುತ್ತನ್ನೆರಚುತ್ತಾ ಕರೆಯುತ್ತಿದ್ದಳು. ಶ್ರೀಶೈಲದ ದೇವಾಲಯದ ಬಳಿ ಪಾತಾಳಗಂಗೆಯಾಗಿ ಮಲ್ಲಿಕಾರ್ಜುನನ ಪಾದವನ್ನು ತೊಳೆಯಲು ಇಷ್ಟು ಆತುರದಿಂದ ಓಡುತ್ತಿರುವಳೆಂದೆನಿಸಿತು ಮಹಾದೇವಿಗೆ.

ಹರಳಯ್ಯನು ಕೊಟ್ಟ ಪಾದರಕ್ಷೆಯನ್ನು ಅಲ್ಲಿ ಬಿಟ್ಟು, ಪಾದಗಳೆರಡನ್ನೂ ನೀರಿನಲ್ಲಿಟ್ಟುಕೊಂಡು, ನೀರಿನ ತುದಿಯ ಕಲ್ಲಿನ ಮೇಲೆ ಕುಳಿತಳು. ಜಲಜಲನೆ ಉಕ್ಕಿಹರಿಯುತ್ತಿರುವ ತಣ್ಣನೆಯ ನೀರನ್ನು ಮುಖದ ಮೇಲೆ ಎರಚಿಕೊಂಡಳು. ಅವಳ ಆಯಾಸದ ಎಷ್ಟೋ ಭಾಗ ಕಡೆಮೆಯಾದಂತಾಯಿತು.

ಚುಂಚರೂ ಸ್ವಲ್ಪ ಕಾಲ ವಿಶ್ರಾಂತಿಯನ್ನು ಪಡೆದರು. ನದಿಯ ದಡದಲ್ಲಿ ಬಹುಶಃ ತಮಗಾಗಿಯೇ ಕಾಯುತ್ತದ್ದ ಇನ್ನಿಬ್ಬರು ಚುಂಚುರು ಅವರನ್ನು