ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೭೩

ಅಲ್ಲಿ ನುಗ್ಗಿ ಮುಂದೆ ಹೆಜ್ಜೆ ಇಟ್ಟ ಕೂಡಲೇ ಆಳವಾದ ಕೊಳ್ಳ ಕಾಣಿಸುತ್ತಿತ್ತು. ಅದನ್ನು ಕಷ್ಟಪಟ್ಟು ಇಳಿಯಲು ಸಹಾಯವಾಗುವಂತೆ ಬಂಡೆಗಳು ಇಳಿಜಾರಾಗಿ ಹರಡಿದ್ದವು. ಅದನ್ನು ಬಿಟ್ಟು ಅದರ ದಡದಲ್ಲಿಯೇ ಮೇಲಕ್ಕೆ ತಿರುಗಿದರು.

ಅಲ್ಲಿ ಮುಂದೆ ಹೋದಂತೆ ಮಾರ್ಗವು ಮೇಲೆ ನಿಂತು ನೋಡಿದ ಹಳ್ಳದ ಹಾಸುಬಂಡೆಯ ಕಡೆಗೆ ಕೊಂಡೊಯ್ಯುತ್ತಿತ್ತು. ಆ ಹಾಸುಬಂಡೆಯನ್ನೇ ಮೇಲ್ಛಾವಣಿಯನ್ನಾಗಿ ಉಳ್ಳ ಗುಹೆಯೊಂದರ ಬಳಿಗೆ ಒಯ್ದು ಮುಟ್ಟಿಸುತ್ತಿತ್ತು ಆ ಮಾರ್ಗ. ಆ ಗುಹೆ ಕಣ್ಣಿಗೆ ಬೀಳುವುದಕ್ಕೆ ಮೊದಲೇ ಅದರ ಮುಂದೆ ಸಾಲಾಗಿ ಬೆಳೆದಿರುವ ಬಾಳೆಯ ಗಿಡಗಳು ಗೋಚರಿಸಿದವು. ಮಹಾದೇವಿಯ ಹೃದಯ ಸಂತೋಷದಿಂದ ಉಕ್ಕಿ ಬಂದಿತು.

ಗುಹೆಯನ್ನು ಪ್ರವೇಶಿಸಿದರು. ಸ್ವಲ್ಪಮಟ್ಟಿಗೆ ಅರ್ಧಚಂದ್ರಾಕಾರವಾಗಿ ಹಬ್ಬಿ ಹರಡಿದ್ದ ಗುಹೆ, ತುಂಬಾ ವಿಸ್ತಾರವಾಗಿತ್ತು. ಗುಹೆಯ ಮುಂಭಾಗ ಅರ್ಧಚಂದ್ರನ ಕೊನೆಯ ಸರಳರೇಖೆಯಂತಿದ್ದು ಹಳ್ಳದ ಎರಡು ಕೊನೆಗಳನ್ನು ಮುಟ್ಟಿನಿಂತಿತ್ತು. ಆ ಮುಂಭಾಗದಲ್ಲಿ ನಿಂತು ನೋಡಿದರೆ ಕೆಳಗೆ ಆಳವಾಗಿದ್ದ ಕಣಿವೆಯಕೊಳ್ಳ ಕಾಣಿಸುತ್ತಿತ್ತು. ಗುಹೆಯ ಮುಂಭಾಗದ ತುದಿಯ ಗಿಡಗಳು ಗುಂಪುಗುಂಪಾಗಿ ಬೆಳೆದುನಿಂತಿದ್ದುವು. ಗುಹೆಯಬಾಗಿಲಲ್ಲಿ ಕಾವಲು ನಿಂತಂತೆ ತೋರುತ್ತಿದ್ದ ಆ ಕದಳಿ ಗಿಡಗಳು ಗಾಳಿಯ ಹೊಡೆತಕ್ಕೆ ಸಿಕ್ಕದೆ, ಬಿರುಬಿಸಿಲಿಗೆ ನಲುಗದೆ ನಳನಳಿಸಿ ಬಾಳನರಳಿಸುವಂತೆ ಬೆಳೆದು ನಿಂತಿದ್ದುವು.

ಪ್ರಭು ಹೇಳಿದಂತೆ ಪ್ರಕೃತಿ ರಚನೆಯ ವೈವಿಧ್ಯಗಳಲ್ಲಿ ಇದೊಂದು ವಿಶಿಷ್ಟವಾದ ಕೃತಿಯೆಂದುಕೊಂಡಳು ಮಹಾದೇವಿ.

“ಈ ಗುಹೆಯ ಮೇಲ್ಛಾವಣಿಯ ಕಲ್ಲಿನ ಮೇಲೆಯೇ ಅಲ್ಲವೇ ನಾವು ಬಂದು ನಿಂತುಕೊಂಡದ್ದು ?” ರಸವಂತಿ ಕೇಳಿದಳು. ಕೌಶಿಕ ಗುಹೆಯ ಇನ್ನೊಂದು ಮೂಲೆಯನ್ನು ಪರೀಕ್ಷಿಸುತ್ತಿದ್ದ.

“ಹೌದು, ರಸವಂತಿ,” ಹೇಳಿದಳು ಮಹಾದೇವಿ.

“ನಾವು ನಿಂತ ಕಲ್ಲಿನ ಕೆಳಗೇ ಕದಳಿಯ ಗುಹೆಯಿದೆಯೆಂದು ನಾನು ಖಂಡಿತವಾಗಿ ಊಹಿಸಿರಲಿಲ್ಲ, ತಾಯಿ. ಇದೊಂದು ಅದ್ಭುತವಾದ ಗುಹೆ !” ಉದ್ಗಾರ ತೆಗೆದಳು ರಸವಂತಿ.

“ನಿಜ, ರಸವಂತಿ; ಈ ಜೀವನವೂ ಹಾಗೆಯೇ. ನಾವು ಜೀವನದ ರಹಸ್ಯದ ಮೇಲೆಯೇ ನಿಂತಿರುತ್ತೇವೆ. ಆದರೆ ಕೆಳಗೆ ಕದಳಿಯಿದೆ ಎಂಬುದನ್ನು ಅರಿಯೆವು. ಯಾವ ಮಾರ್ಗದಿಂದ ಒಳಹೊಕ್ಕು ಕಾಣಬೇಕೆಂಬುದನ್ನು ಶ್ರೀಗುರು ತೋರಿಸುತ್ತಾನೆ.