ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬

ಕದಳಿಯ ಕರ್ಪೂರ

ವಿಷಯವೆಂಬ ಕ್ರೂರ ಪ್ರಾಣಿಗಳು ಏನೂ ಮಾಡಲಾರವೆಂಬುದನ್ನು ಸೂಚಿಸುವಂತಿತ್ತು ಆ ನಿಲುವು.

ಬೆಳಗಾಯಿತು. ಬೆಳಗಿನ ಸೂರ್ಯನ ಮೊಟ್ಟಮೊದಲನೆಯ ಕಿರಣಗಳು ಗುಹೆಯಲ್ಲಿ ಧ್ಯಾನಸ್ಥಳಾಗಿ ಕುಳಿತ ಮಹಾದೇವಿಯ ಸೇವೆಗೈಯಲೆಂಬಂತೆ ಬಂದು ಬೀಳುತ್ತಿದ್ದುವು.

ಗುಪ್ತವಾದ ಸ್ಥಳದಲ್ಲಿದ್ದರೂ ಗುಹೆಗೆ ಗಾಳಿ ಬೆಳಕುಗಳ ಆಶ್ರಯ ತುಂಬಾ ಅನುಕೂಲವಾಗಿತ್ತು. ಇದು ಬುಗ್ಗುವಾಗುವಿನ ಬಳಿ ಕಂಡ ಗುಹೆಯಂತೆ ಕಗ್ಗತ್ತಲು ಕೋಣೆಯಾಗಿರಲಿಲ್ಲ. ಅನುಷ್ಠಾನಕ್ಕೆ ತುಂಬಾ ಪ್ರಶಸ್ತವಾದ ಸ್ಥಳವಾಗಿತ್ತು. ಆದುದರಿಂದಲೇ ಇದು ಅನೇಕ ಸಿದ್ಧರನ್ನೂ ಸಾಧಕರನ್ನೂ ಆಕರ್ಷಿಸಿದೆಯೆಂದುಕೊಂಡಳು. ಬುಗ್ಗುವಾಗುವಿನ ಚುಂಚರು ತಮ್ಮ ಹಳ್ಳಿಗೆ ಹಿಂತಿರುಗಲು ಮಹಾದೇವಿಯ ಅಪ್ಪಣೆ ಕೇಳಿದರು. ಆಗ ಮಹಾದೇವಿ ಕೌಶಿಕ ರಸವಂತಿಯರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದಳು ಅವರಿಗೆ. ಮಹಾದೇವಿಯ ಅಭಿಪ್ರಾಯವನ್ನು ಅರಿತು ತಾವೂ ಹೊರಡಲು ಸಿದ್ಧರಾಗಬೇಕಾಯಿತು, ಕೌಶಿಕ ರಸವಂತಿಯರು.

“ನೀವು ಒಬ್ಬರೇ ಇಲ್ಲಿ ಹೇಗೆ ಇರುತ್ತೀರಿ, ತಾಯಿ?” ಕೇಳಿದಳು ರಸವಂತಿ.

“ಅದನ್ನೇನೂ ಯೋಚಿಸಬೇಡ, ರಸವಂತಿ, ಅದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ. ನಾನು ಏಕಾಂಗಿಯೆಂಬುದೇ ಇಲ್ಲ. ಚನ್ನಮಲ್ಲಿಕಾರ್ಜುನ ಸದಾ ನನ್ನ ಸಂಗಡ ಇದ್ದಾನೆ. ಬಹುಶಃ ನಾನಿನ್ನು ಹೆಚ್ಚು ಕಾಲ ಅವನಿಂದ ಬೇರೆಯಾಗಿರಲಾರೆ. ನನ್ನ ಜೀವನದ ಗುರಿ ಸಿದ್ಧಿಸಿತು. ನನ್ನ ಬಯಕೆಗಳೆಲ್ಲಾ ಕೈಗೂಡಿದುವು. ನಾನು ನಿಯೋಜಿಸಿದ ಮಾರ್ಗದಲ್ಲಿ ನೀವು ನಡೆಯಿರಿ, ಇದೇ ನನ್ನ ಕೊನೆಯ ಬಯಕೆ.”

“ಹಾಗೆ ಹೇಳಬೇಡಿ ತಾಯಿ. ನೀವು ನಮಗೆ ಮುಂದೆಯೂ ಮಾರ್ಗದರ್ಶಕರಾಗಿರಬೇಕು. ನಮಗೆ ತಮ್ಮನ್ನು ನೋಡಬೇಕೆಂದು ಆಶೆಯಾದಾಗಲೆಲ್ಲಾ ಈ ಪರ್ವತವನ್ನು ಹತ್ತಿ ಓಡಿಬರುತ್ತೇವೆ ಇಲ್ಲಿಗೆ.” ರಸವಂತಿ ಕಾತರಗೊಂಡು ಹೇಳಿದಳು.

“ಇನ್ನು ಈ ವ್ಯಾಮೋಹವನ್ನು ಬಿಡು, ರಸವಂತಿ. ನೀವು ಮೇಲೇರಿ ಬಂದು ನನ್ನನ್ನು ಕಾಣುವ ಕಷ್ಟವನ್ನು ತಪ್ಪಿಸುತ್ತೇನೆ. ಸಾಕಾರದ ಈ ದೇಹವನ್ನು ಧರಿಸಿದ್ದ ನಾನು, ನಿರಾಕಾರಳಾಗಿ ನಿಮ್ಮಿಬ್ಬರ ಹೃದಯದಲ್ಲಿ ಬಂದು ನೆಲೆಸುತ್ತೇನೆ.” ಗಂಭೀರವಾಗಿತ್ತು ಮಹಾದೇವಿಯ ಧ್ವನಿ.