ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫

ಬೆಳೆಯುವ ಬೆಳಕು

ಸುಂದರವಾಗಿ ಕಂಗೊಳಿಸುತ್ತಿತ್ತು. ವಿಸ್ತಾರವಾದ ಆ ಉದ್ಯಾನದ ಒಂದು ಭಾಗ ರಾಜನಿಗಾಗಿ, ರಾಜಪರಿವಾರಕ್ಕಾಗಿ ಮಾತ್ರ ಮೀಸಲಾಗಿತ್ತು. ಇನ್ನುಳಿದ ಭಾಗವೆಲ್ಲಾ ಸಾರ್ವಜನಿಕ ವಿಶ್ರಾಂತಿ ಮತ್ತು ವಿಹಾರಸ್ಥಳವಾಗಿತ್ತು. ಉದ್ಯಾನದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದಕ್ಕಾಗಿಯೇ ವಿಶೇಷವಾದ ರಾಜಸಿಬ್ಬಂದಿ ನೇಮಕವಾಗಿತ್ತು.

ಈಚೆಗೆ ಕೌಶಿಕರಾಜನು ಪಟ್ಟಾಭಿಷಿಕ್ತನಾದ ಮೇಲಂತೂ ಉದ್ಯಾನವನಕ್ಕೆ ಒಂದು ಹೊಸ ಕಾಂತಿ ಬಂದಿತ್ತು. ಅರಮನೆಯ ರಾಜೋದ್ಯಾನಕ್ಕೆ ಕೊಡುವಷ್ಟೇ ಗಮನವನ್ನು ಇದಕ್ಕೂ ಕೊಟ್ಟಿದ್ದ ಕೌಶಿಕ. ಸೌಂದರ್ಯೋಪಾಸಕನಾಗಿದ್ದ ಆ ತರುಣ ರಾಜ, ತಾನೇ ನಿಂತು ಅತ್ಯಾಸಕ್ತಿಯಿಂದ ಇದನ್ನು ಇಂದ್ರನ ನಂದನವನವನ್ನಾಗಿ ಮಾರ್ಪಡಿಸಿದ್ದ.

ಅಪೂರ್ವವಾದ ತರುಲತಾದಿಸಮೂಹಗಳಿಂದ, ನಯನಮನೋಹರವಾದ ನೂರಾರು ಬಗೆಯ ಪುಷ್ಪಸಂಚಯಗಳಿಂದ, ನೋಡಿದವರ ಕಣ್ಮನಗಳನ್ನು ಅದು ಅಪಹರಿಸುವಂತಿತ್ತು. ಮಲ್ಲಿಕಾಕುಂಜಗಳು, ಮಾಧವೀಲತಾಗೃಹಗಳೂ, ಸುರಗಿಯ ಪರಿಮಳ ಮಂಟಪಗಳು, ಮಾವಿನ ತೋಪುಗಳು, ಮಂದಾರದ ಮಂಗಳಮಂದಿರಗಳು ಒಂದೊಂದೂ ಕೌಶಿಕರಾಜನ ಸೌಂದರ್ಯೋಪಾಸನೆಗೆ ಸಾಕ್ಷಿಯನ್ನು ನುಡಿಯುವಂತಿದ್ದವು. ರಾಜಧಾನಿಯ ಹೆಮ್ಮೆಯ ಆಸ್ತಿಯಾಗಿತ್ತು ಆ ಉದ್ಯಾನವನ.

ಗಿಡಗಳ ಮೇಲೆ, ಲತೆಗಳ ಮೇಲೆ ತಲೆಯೆತ್ತಿ ನಿಂತಿರುವ ನಾನಾ ವರ್ಣದ ಹೂವುಗಳು, ಬೆಳಗಿನ ಶೀತಲ ಮಂದಮಾರುತನ ವಿನ್ಯಾಸಕ್ಕೆ ಅನುಗುಣವಾಗಿ ಲಾಸ್ಯವಾಡುತ್ತಾ ಆಹ್ವಾನವೀಯುವಂತಿದ್ದುವು. ಅವುಗಳ ನಾನಾ ಬಗೆಯ ಒಟ್ಟು ಪರಿಮಳದಿಂದ ಸುಗಂಧಿತನಾದ ವಾಯುದೇವ, ಬಹುದೂರದಿದಲೇ ಅತಿಥಿಗಳಿಗೆ ಸ್ವಾಗತವೀಯುತ್ತಾ, ಸೌಂದರ್ಯದ ಸನ್ನಿಧಿಯ ಕಡೆಗೆ ಕರೆದೊಯ್ಯುತ್ತಿದ್ದ. ಅದನ್ನು ಸಮೀಪಿಸುತ್ತಿದ್ದಂತೆಯೇ ಉಳಿದೆಲ್ಲ ಮಾತುಗಳು ಮರೆತುಹೋಗಿ, ಅದರ ಸೌಂದರ್ಯವೇ ಮನಸ್ಸನ್ನು ತುಂಬುತ್ತಿತ್ತು. ಈಗಲೂ ಹಾಗೆಯೇ ಆಯಿತು, ಮಹಾದೇವಿ ಮತ್ತು ಗೆಳತಿಯರಿಗೆ. ಉದ್ಯಾನವನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲವನ್ನು ಮರೆತರು.

ಹೂವುಗಳ ಮಧ್ಯದಲ್ಲಿ ಹೂವುಗಳಾಗಿ ಇವರೂ ಸುತ್ತಿದರು. ಆವಶ್ಯಕವಾದಷ್ಟು ಹೂವುಗಳನ್ನು ಎತ್ತಿಕೊಂಡರು. ಈ ವೇಳೆಗೆ ಸೂರ್ಯ ಮೇಲೆ ಬರುತ್ತಿದ್ದ. ಎಳೆಯ