ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು

“ನಾನೂ ಗುರುಗಳ ಜೊತೆಯಲ್ಲಿ ಹೋಗುತ್ತೇನೆ. ಶ್ರೀಶೈಲಕ್ಕೆ ನನ್ನನ್ನು ಕಳುಹಿಸಿಕೊಡಿ. ಮಲ್ಲಿಕಾರ್ಜುನ ನನ್ನನ್ನು ಕೈಬೀಸಿ ಕರೆದಂತಾಯ್ತು.”
“ಹುಚ್ಚು ಹುಡುಗಿ! ಅದನ್ನೇ ಆಲೋಚಿಸುತ್ತಾ ಮಲಗಿದ್ದೆಯೇನೋ, ಅದೇ ಕನಸು ಬಿದ್ದಿದೆ. ಸುಮ್ಮನೆ ಮಲಗು” ಎಂದು ಸಮಾಧಾನಪಡಿಸಲು ಯತ್ನಿಸಿದ ಓಂಕಾರ.
“ಅವ್ವಾ, ನೀನಾದರೂ ಹೇಳವ್ವ ಅಪ್ಪನಿಗೆ, ನನ್ನನ್ನು ಕಳುಹಿಸಿಕೊಡಲಿ.” ತಾಯಿಯನ್ನು ಬೇಡಿದಳು.
“ನಾವಾರೂ ಇಲ್ಲದೆ ನೀನೊಬ್ಬಳೇ ಹೇಗೆ ಹೋಗುತ್ತೀಯ, ಮಹಾದೇವಿ. ಹಾಗೆಲ್ಲ ನಮ್ಮನ್ನು ಬಿಟ್ಟು ಹೋಗಬಾರದು. ಇನ್ನೊಂದು ಸಾರಿ ನಾವೆಲ್ಲಾ ಹೋಗೋಣ.” ತಾಯಿ ಸಂತೈಕೆಯ ಮಾತುಗಳನ್ನಾಡಿದಳು.
ಆದರೆ ಅವಳ ಹಂಬಲ ಅಷ್ಟಕ್ಕೇ ಅಡಗಲಿಲ್ಲ. ಬೆಳಿಗ್ಗೆ ಗುರುಗಳನ್ನು ಬೀಳ್ಕೊಡಲು ಮಠಕ್ಕೆ ಹೋದಾಗ ಅಲ್ಲಿಯೂ ಗುರುಗಳ ಎದುರಿನಲ್ಲಿಯೇ ತನ್ನ ಬಯಕೆಯನ್ನು ಹೇಳಿದಳು:
“ಗುರುಗಳೇ, ನನ್ನನ್ನು ಕರೆದುಕೊಂಡು ಹೋಗಿ ಗುರುಗಳೇ ಶ್ರೀಶೈಲಕ್ಕೆ.”
ಗುರುಗಳು ಅವಾಕ್ಕಾಗಿ ಓಂಕಾರನ ಮುಖ ನೋಡಿದರು.
“ನೋಡಿ, ಬೆಳಗಿನಿಂದ ಹಾಗೆ ಹಟ ಹಿಡಿದಿದ್ದಾಳೆ, ತಾನೂ ಹೋಗುತ್ತೇನೆಂದು. ನೀವೇ ಸರಿಯಾಗಿ ಹೇಳಿ, ಗುರುಗಳೇ.” ಓಂಕಾರ ಹೇಳಿದ.
ಅವಳ ತಲೆದಡವಿ ಮುಂಗುರುಳನ್ನು ತಿದ್ದುತ್ತಾ ಹೇಳಿದರು ಗುರುಗಳು:
“ನೀನೂ ಬರುತ್ತೀಯ ಮಗೂ ಶ್ರೀಶೈಲಕ್ಕೆ? ಆದರೆ ನಿನಗದು ಸಾಧ್ಯವಿಲ್ಲ.”
“ಏಕೆ ಗುರುಗಳೇ, ನನಗೇಕೆ ಸಾಧ್ಯವಿಲ್ಲ?” ತಲೆಯೆತ್ತಿ ಕೇಳಿದಳು ಗುರುಗಳನ್ನು ನೋಡುತ್ತಾ ಮಹಾದೇವಿ.
“ನೀನು ಹೆಣ್ಣುಮಗಳು... ಅಲ್ಲದೆ....” ಗುರುಗಳು ಆ ಮಾತನ್ನು ಪೂರ್ಣಗೊಳಿಸುವುದಕ್ಕೆ ಮುನ್ನವೇ ಕೇಳಿದಳು ಮಹಾದೇವಿ: “ಆದರೇನು? ಹೆಣ್ಣುಮಕ್ಕಳು ಶ್ರೀಶೈಲಕ್ಕೆ ಹೋಗಬಾರದೇ? ಮಲ್ಲಿಕಾರ್ಜುನ ದರ್ಶನ ಗಂಡಸರಿಗೆ ಮಾತ್ರವೋ?” ದಿಟ್ಟತನವಿತ್ತು ಪ್ರಶ್ನೆಯಲ್ಲಿ.
“ಮಹಾದೇವಿ, ಏನದು ಗುರುಗಳೆದುರಿನಲ್ಲಿ ನಿನ್ನ ಆಧಿಕಪ್ರಸಂಗ?” ಓಂಕಾರ ಸ್ವಲ್ಪ ಕೋಪದಿಂದಲೆಂಬಂತೆ ಗದರಿಸಿದ. ಆದರೆ ಮುಗುಳುನಗುತ್ತಾ ಹೇಳಿದರು ಗುರುಗಳು: “ಗದರಿಸಬೇಡ, ಓಂಕಾರ. ಈ ಪುಟ್ಟ ದೇಹದಲ್ಲಿರುವ ದಿಟ್ಟತನವನ್ನು ಕಂಡು ಮೆಚ್ಚು” ಎಂದು ನುಡಿದು ಮತ್ತೆ ಮಹಾದೇವಿಗೆ: