ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦

ಕದಳಿಯ ಕರ್ಪೂರ

ಬಂದು ಸೇರಿವವುದೆಂದು ನಿಶ್ಚಯವಾಯಿತು.

ಇತ್ತ ಕೌಶಿಕನ ವೈಹಾಳಿ ತುಂಬಾ ಯಶಸ್ವಿಯಾಗಿ ನಡೆಯಿತು. ನಾಲ್ಕು ಜನರಿಗೂ ಬಗ್ಗದ ಆ ಕುದುರೆಯ ದೇಹದಿಂದ ಬೆವರು ಕೀಳುವಂತೆ ಹತ್ತಾರು ಸುತ್ತುಗಳನ್ನು ಕೌಶಿಕ ಓಡಿಸಿದ. ಕುದುರೆ ಸವಾರಿಯಲ್ಲಿ ಅತಿಬಲ್ಲಿದನಾದ ಬಲಿಷ್ಠ ತರುಣರಾಜ ಕೌಶಿಕನ ಮುಂದೆ, ಕುದುರೆಯ ಆಟ ನಡೆಯದೆ ಅವನು ಹೇಳಿದಂತೆ ಕೇಳಬೇಕಾಯಿತು. ಒಂದೆರಡು ಸುತ್ತು ಬರುವುದರೊಳಗೆ, ಅದರ ನಗೆದಾಟ ಕಡಿಮೆಯಾಯಿತು, ಸಂಪೂರ್ಣವಾಗಿ ಅವನ ವಶವಾಯಿತು. ಅವನ ವಿಚಕ್ಷಣತೆಯನ್ನೂ, ಬಲ್ಮೆಯನ್ನೂ ಕಂಡು ಜನ ಸಂತೋಷದಿಂದ ಜಯಘೋಷ ಮಾಡಿದರು.

ಅನಂತರ ರಾಜ ತನಗಾಗಿ ಏರ್ಪಡಿಸಿದ್ದ ವಿಶೇಷ ಗುಡಾರದಲ್ಲಿ ವಿಶ್ರಾಂತಿಯನ್ನು ಪಡೆದ. ಉತ್ಸವದ ಸಿದ್ಧತೆ ಭರದಿಂದ ಸಾಗತೊಡಗಿತ್ತು.

ಆನೆಯನ್ನು ಆಲಂಕರಿಸಿದರು. ಅದರ ಮೇಲೆ ಥಳಥಳನೆ ಹೊಳೆಯುತ್ತಿರುವ ಅಂಬಾರಿಯನ್ನು ಏರಿಸಿ ಕಟ್ಟಲಾಯಿತು. ಸೈನ್ಯವು ರಾಜಬೀದಿಯಲ್ಲಿ ನಡೆಯಬೇಕಾದ ಕ್ರಮದಲ್ಲಿ ಸಜ್ಜುಗೊಂಡು ನಿಂತಿತು.

ಮೊಟ್ಟಮೊದಲ ಕುದುರೆಯ ಸೈನ್ಯ. ಅದರ ಹಿಂದೆ ಇಡೀ ಉತ್ಸವವನ್ನೇ ನಡೆಸಿಕೊಂಡು ಹೋಗುವ ನಾಯಕನ ಗಾಂಭೀರ್ಯದಿಂದ ನಡೆಯುತ್ತಿರುವ ಒಂದು ಆನೆ, ಅದರ ಮೇಲೆ ಎತ್ತರವಾಗಿ ಹಾರಾಡುತ್ತಿರುವ ಕೌಶಿಕನ ವಿಜಯ ಧ್ವಜವನ್ನು ಹಿಡಿದ ರಾಜಸಿಪಾಯಿಗಳು.

ಅದರ ಹಿಂದೆ ಕುದುರೆ ಸೈನ್ಯ ನಂತರ ಸಮವಸ್ತ್ರಧಾರಿಗಳಾದ ಕಾಲಾಳುಗಳು. ನಡುವಿಗೆ ಕಟ್ಟಿದ ಒರೆಯಲ್ಲಿ ಕತ್ತಿ ; ಕೈಯಲ್ಲಿ ಈಟಿ ; ಸಾಲು ಸಾಲಾಗಿ ಶಿಸ್ತಿನಿಂದ ನಡೆಯುತ್ತಿದ್ದರು.

ಇದಾದ ಕೂಡಲೇ ರಾಜನು ಕುಳಿತಿರುವ ಆನೆ. ಆನೆಯ ಮುಂದೆ ರಾಜವಾದ್ಯಗಳ ಸಮೂಹ. ರಾಜನ ಕೀರ್ತಿಯನ್ನು ಮುಗಿಲು ಮುಟ್ಟಿಸುವಂತೆ ಭೋರ್ಗರೆಯುತ್ತಿದ್ದುವು. ಆನೆ ಗಂಭೀರವಾದ ಗತಿಯಿಂದ ವಾದ್ಯಗಾರರನ್ನು ಹಿಂಬಾಲಿಸುತ್ತಿತ್ತು. ತನ್ನ ಮೈಯೇ ಕಾಣದಷ್ಟು ಅಲಂಕಾರಗಳನ್ನು ಅದು ಹೊತ್ತಿತ್ತು. ಎಲ್ಲಕ್ಕಿಂತ ಹೆಚ್ಚಿನ ಅಲಂಕಾರವೆಂದರೆ ಕೌಶಿಕರಾಜ, ಅದರ ಬೆನ್ನ ಮೇಲೆ ಅಂಬಾರಿಯಲ್ಲಿ ವಿರಾಜಮಾನನಾಗಿದ್ದುದು. ಅಂಬಾರಿಯ ಮುಂದೆ ಮಾವುತ ; ಅಂಬಾರಿಯಲ್ಲಿ ರಾಜನಿಗೆ ಸ್ವಲ್ಪ ಹಿಂದೆ ವಸಂತಕ ಕುಳಿತಿದ್ದರು.