ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೭೯

ಸಹಿಸಿಕೊಂಡು ಅಲ್ಲಿ ನಿಲ್ಲುವುದು ಸಾಧ್ಯವಿತ್ತೇ ?' ಎಂಬ ಭಾವ ಸುಳಿಯುವುದು.

ಉತ್ಸವ ಮುಂದೆ ಹೋದ ಮೇಲೆ ಗೆಳತಿಯರು ಬಂದು :

`ಏನಮ್ಮಾ ! ರಾಜದೃಷ್ಟಿ ನಿನ್ನ ಮೇಲೆ ಬಿತ್ತು !' ಎಂದು ಹಾಸ್ಯ ಮಾಡಿದರೂ ನಡೆದ ಘಟನೆಯ ಕಹಿ ಅವರ ಮನಸ್ಸಿಗೂ ನಾಟಿತ್ತು. ಅದಕ್ಕಾಗಿ ಅವಳನ್ನು ಸಮಾಧಾನಪಡಿಸಿ ನಡೆದರು.

ಓಂಕಾರ - ಲಿಂಗಮ್ಮರಿಗೂ ವಿಷಯ ತಿಳಿದಿತ್ತು. ಅವರು ಕೆಳಗೆ ನಿಂತು ಉತ್ಸವವನ್ನು ನೋಡುತ್ತಿದ್ದರು. ಓಂಕಾರ ಪುರಪ್ರಮುಖರೊಡನೆ ರಾಜನಿಗೆ ಕಾಣಿಕೆಯ ಗೌರವವನ್ನು ಅರ್ಪಿಸುವುದರಲ್ಲಿ ಭಾಗಿಯಾಗಿದ್ದ. ರಾಜದೃಷ್ಟಿ ಹರಿದಿರುವ ದಿಕ್ಕನ್ನು ನೋಡಿದ್ದ. ಮಹಾದೇವಿ ಸರಕ್ಕನೆ ಒಳಗೆ ನಡೆದುದನ್ನೂ ಗಮನಿಸಿದ್ದ. ಅಕ್ಕಪಕ್ಕದ ಪಿಸುಮಾತುಗಳೂ ಕಿವಿಗೆ ಬಿದ್ದಿದ್ದುವು.

ರಾಜನ ಸ್ವಭಾವವನ್ನು ಬಲ್ಲ ಓಂಕಾರನಗೆ ಇದಾವುದೋ ಒಂದು ಹೊಸ ವಿಪತ್ತಿನ ನಾಂದಿಯೇನೋ ಅನಿಸಿತು. ಅದನ್ನು ಲಿಂಗಮ್ಮನಿಗಾಗಲೀ ಮಹಾ ದೇವಿಗಾಗಲೀ ಆಡಿ ತೋರಿಸದಿದ್ದರೂ ಒಬ್ಬೊಬ್ಬರ ಮನಸ್ಸೂ ಅದನ್ನೇ ಊಹಿಸಿಕೊಳ್ಳುತ್ತಿತ್ತು.

ಬೆಳಗ್ಗೆ ಮಹಾದೇವಿ ಎಂದಿನಂತೆ ಸ್ನಾನಪೂಜೆಗಳನ್ನು ಮುಗಿಸಿದಳು. ಇಂದು ಅವಳ ಮನಸ್ಸು ಅಶಾಂತಿಯಿಂದ ತುಯ್ದಾಡುತ್ತಿತ್ತು. ಆವುದೋ ಕಾಣದ ಕರೆಯೊಂದು, ಒಂದೇ ಸಮನೆ ಹೃದಯದಲ್ಲಿ ಮೊರೆದಂತೆ ಆಗುತ್ತಿತ್ತು. ಏನೋ ಹೇಳಲಾಗದ ಒಂದು ಅತೃಪ್ತಿ ; ತಿಳಿಯಲಾಗದ ಒಂದು ತಳಮಳ. ವಚನಗಳ ಕಟ್ಟನ್ನು ತೆಗೆದುಕೊಂಡು ಕುಳಿತಳು. ಅವುಗಳಲ್ಲಾದರೂ ಶಾಂತಿಯನ್ನು ಅರಸಬೇಕೆಂದು ಬಯಸಿತ್ತು ಅವಳ ಮನಸ್ಸು.

ಓಂಕಾರ ಮಹಡಿಯ ಮೇಲಿನ ತನ್ನ ಕೋಣೆಯಲ್ಲಿ ಕುಳಿತು ಯಾವುದೋ ಲೆಕ್ಕದಲ್ಲಿ ತೊಡಗಿದ್ದ. ಲಿಂಗಮ್ಮ ಒಳಗೆ ತನ್ನ ಕೆಲಸದಲ್ಲಿ ನಿರತಳಾಗಿದ್ದಳು. ಆಳು ಕಾಳುಗಳೂ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲಿ :

``ಓಂಕಾರಶೆಟ್ಟರೆ... ಓಂಕಾರಶೆಟ್ಟರೇ............

- ಬಾಗಿಲಲ್ಲಿ ಯಾರೋ ಕರೆದಂತಾಯಿತು.

ರಾಜಗೆಳೆಯನಿಗೆ ಯೋಗ್ಯವಾದ ಉಡುಗೆಯ ಠೀವಿಯಿಂದ ವಸಂತಕ ಬಾಗಿಲಲ್ಲಿ ನಿಂತಿದ್ದನು. ಅವನ ಹಿಂದೆ ರಸ್ತೆಯ ಮೇಲೆ ನಾಲ್ಕಾರು ಜನ ಸಿಪಾಯಿಗಳು ಬೇರೆ ನಿಂತಂತೆ ತೋರಿತು ಲಿಂಗಮ್ಮನಿಗೆ.