ಈ ಪುಟವನ್ನು ಪರಿಶೀಲಿಸಲಾಗಿದೆ

"೧೭೪೧ನೆಯ ಇಸವಿಯಲ್ಲಿ ಹುಟ್ಟಿದ ಮಂಗಳೂರಿನ ಬಾಸೆಲ್ ಮಿಶ್ಯನ್ ಛಾಪಖಾನೆಯಲ್ಲಿ 'ಕಲ್ಯಾಣಪ್ಪನ ಪ್ರಸಂಗ' ಎಂದು ಒಂದು ಯಕ್ಷಗಾನ ಪ್ರಸಂಗವು ಅಚ್ಚಾಗಿತ್ತು. ಅದನ್ನು ಕೂಡಲೆ ಇಂಗ್ಲಿಷ್ ಸರಕಾರವು ಕಂಡುಹಿಡಿದು ಅದರ ಪ್ರತಿಗಳನ್ನೆಲ್ಲ ಸುಟ್ಟುಹಾಕಿಸಿತಂತೆ." [ಗೋವಿಂದ ಪೈಯವರು ನನಗೆ ಬರೆದಿರುವ ಒಂದು ಪತ್ರದಿಂದ]

ಬಾಸೆಲ್ ಮಿಶ್ಯನಿನವರು ಇಂಗ್ಲಿಷರಲ್ಲ - ಜರ್ಮನರು, ಎಂಬುದನ್ನು ಗಮನದಲ್ಲಿಟ್ಟರೆ, ಮೇಲಿನ ಮಾಹಿತಿ ಅರ್ಥಪೂರ್ಣವಾಗಿ ಯಾರಿಗಾದರೂ ತೋರಲೇಬೇಕು. ಬರಿಯ ಕಳ್ಳನ ಕಥೆ ಎಂದಾದರೆ ಪ್ರತಿಗಳನ್ನು ಸುಟ್ಟು ಹಾಕುವ ಅಗತ್ಯ ಇಂಗ್ಲಿಷ್ ಸರಕಾರಕ್ಕೆ ಖಂಡಿತವಾಗಿಯೂ ಇರುತ್ತಿರಲಿಲ್ಲ. ಕಲ್ಯಾಣಸ್ವಾಮಿಯ ಕಥೆ ಮುಗಿದ ಬಳಿಕ,ಇಂಗ್ಲಿಷರು ತೋರಿಸಿದ ಧೋರಣೆ ಯಾವುದು?

".....ಬೋಪುದಿವಾನನಿಗೂ ಆತನ ಜನರಿಗೂ ಕಂಪೆನಿ ಸರಕಾರದವರು..ಜಹಗೀರು ಭೂಮಿಗಳನ್ನೂ ಯುದ್ಧದಲ್ಲಿ ಸತ್ತು ಹೋದವರ ಕುಟುಂಬದವರಿಗೆ ಮೂರು ತಲೆಗಳವರೆಗೆ ಪೆನ್ಶನ್ನನ್ನೂ ಕಾಟಕಾಯಿಯಲ್ಲಿ. ಭಾಗವಹಿಸಿದರವರ ಯೋಗ್ಯತೆಗನುಸಾರವಾಗಿ ಚಿನ್ನ, ಬೆಳ್ಳಿ, ಪದಕಗಳನ್ನೂ ಕೊಟ್ಟರು. ಚಿನ್ನದ ಪದಕವು ಸರಪಣಿ ಸಮೀತ ಹನ್ನೊಂದೊವರೆ ತೊಲೆ ತೂಕವುಳ್ಳದ್ದಾಗಿದ್ದಿತ್ತು.ಆ ಪದಕದ ಒಂದು ಬದಿಯಲ್ಲಿ ಒಬ್ಬ ಕೊಡಗು ವೀರನು ಯುದ್ಧ ಮಾಡುವ ಹಾಗೆ ಅಚ್ಟೋತ್ತಿದೆ. ಇನ್ನೊಂದು ಬದಿಯಲ್ಲಿ ಪೀಚೆಕತ್ತಿ ಮತ್ತು ಒಡಿಕತ್ತಿಗಳನ್ನು ಒಂದು ಹಾರದಲ್ಲಿ ಕಟ್ಟಿ ಸಿಕ್ಕಿಸಿದ ಹಾಗೆ ಬಿಡಿಸಿದೆ. ಇದಲ್ಲದೆ ಆ ಪದಕದ ಒಂದು ಬದಿಯಲ್ಲಿ ಇಂಗ್ಲಿಷಿನಲ್ಲಿ "For distinguished conduct and loyalty to the British Government, Coorg. April 1837" ಎಂದು ಬರೆದಿದೆ. ಆದರೆ ತರ್ಜುಮೆಯು ಕನ್ನಡದಲ್ಲಿ ಇನ್ನೊಂದು ಬದಿಯಲ್ಲಿದೆ."

ಕಳ್ಳನನ್ನು ಹಿಡಿದರೆಂಬ ಕಾರಣದಿಂದ 'ವೀರರಿಗೆ' ಇಷ್ಟೊಂದು ಸತ್ಕಾರ ಮಾಡಿದರೆಂದು ನಂಬುವುದು ಕಷ್ಟ.