ಈ ಪುಟವನ್ನು ಪರಿಶೀಲಿಸಲಾಗಿದೆ

ಭಟ್ಟರು, ಶ್ರೀ ಪಿ.ಕೆ.ನಾರಾಯಣರು ನನಗೋಸ್ಕರ ತಮ್ಮ ನೆನಪುಗಳ ಭಂಡಾರಗಳನ್ನು ತಾವಾಗಿಯೇ ತೆರೆದರು.

ಬಾಲ್ಯಸ್ನೇಹಿತ ಶ್ರೀ ಮನಮೋಹನ ಪ್ರಭು, ಕೇಳಿದೊಡನೆಯೇ ಒಂದೆರಡು ಪುಸ್ತಕಗಳನ್ನು ಕಳುಹಿಕೂಟ್ಟರು . ವಿಷಯ ಸಂಗ್ರಹಕ್ಕೆಂದು ಮಡಿಕೇರಿಗೆ ಹೋದಾಗ, ನಿತ್ಯೋತ್ಸಾಹಿಯಾದ ಶ್ರೀ ಅನಂತಪದ್ಮನಾಭರಾಯರು, ಬರೆಹಗಾರ ಸೋದರ ಶ್ರೀ ಬಿ.ಡಿ.ಗಣಪತಿಯವರು, ಅವಿರಾಮ ಜೀವಿ ಶ್ರೀ ಕುಟ್ಟಪ್ಪನವರು, ಸಂತೋಷದಿಂದ ನನಗೆ ಸಲಹೆ ಸಹಾಯಗಳನ್ನು ನೀಡಿದರು.

ಶ್ರೀ ಡಿ.ಎನ್.ಕೃಷ್ಣಯ್ಯನವರು, ನನ್ನ ವಿಚಾರಗಳು ಸ್ಪುಟಗೊಳ್ಳಲು ನೆರವಾದರು. ಶ್ರೀ ಎ.ಆರ್.ಶಗ್ರಿತ್ತಾಯರು ತಮ್ಮ ಯಕ್ಷಗಾನ ಕೃತಿಯನ್ನು ಕಳುಹಿಕೊಟ್ಟರು. ಶ್ರೀ ಗೋವಿಂದಪೈಯವರಂತೂ ತಾವು ನೀಡಿದ ಅಮೂಲ್ಯ ಸಹಾಯದಿಂದ ನನ್ನನ್ನು ಮೂಕನಾಗಿ ಮಾಡಿದರು.

ಇವರೆಲ್ಲರಿಗೆ, ಸಂವತ್ಸರಗಳನ್ನು ಗುರುತುಹಚ್ಚಲು ನೆರವಾದ ಪಂಚಾಂಗ ಮಂದಿರದ ಶ್ರೀ ಶ್ರೀನಿವಾಸರಿಗೆ, ಶ್ರೀ ಗುರುರಾಜರಿಗೆ, ಬರವಣಿಗೆ ಸಾಗಿದ್ದಂತೆಯೆ 'ಬರೆದಾಯಿತೆ? ಅಚ್ಚಾಯಿತೆ?' ಎಂದು ಕೇಳುತ್ತ ಸ್ವಾಗತಾರ್ಹವಾದ 'ಕಿರುಕುಳ'ವನ್ನಿತ್ತ ಅನೇಕ ವಾಚಕ ಮಿತ್ರರಿಗೆ, ಬರೆದಂತೆಲ್ಲ ಓದಿದುದಕ್ಕೆ ಕಿವಿಗೂಟ್ಟು ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ ಒಡತಿ ಅನುಪಮಾಗೆ, ನಾನು ಕೃತಜ್ಞ....

ಮುಂದಿನ ವರ್ಷ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವವನ್ನು ಸ್ವತಂತ್ರ ಭಾರತ ಆಚರಿಸಲಿದೆ. ಆ ರಾಷ್ಟ್ರೀಯ ಉತ್ಸವಕ್ಕಿದು ಕನ್ನಡ ಬರೆಹಗಾರನಾದ ನನ್ನ ಕಾಣಿಕೆ....

'ಕಲ್ಯಾಣಸ್ವಾಮಿ'ಗೆ ಸಮಕಾಲೀನವಾಗಿದ್ದ ಇನ್ನೊಬ್ಬ ವ್ಯಕ್ತಿಯ ನೇತೃತ್ವದಲ್ಲಿ ನಡೆದ ಹೋರಾಟದ ರೋಮಾಂಚಕಾರಿ ಕಥೆಯೊಂದಿದೆ. ಸದ್ಯದಲ್ಲೇ ನಾನು ಬರೆಯಬೇಕೆಂದಿರುವ ಆ ಕಾದಂಬರಿಯ ಹೆಸರು 'ವೀರ ಅಪರಂಪ.' ಅದು 'ಕಲ್ಯಾಣಸ್ವಾಮಿ'ಗೆ ಸೋದರ ಕೃತಿ. ಅದನ್ನೂ ನನ್ನ ಓದುಗರು ಸ್ವಾಗತಿಸುವರೆಂದು ನಾನು ನಂಬಿದ್ದೇನೆ. ಇದು ನನ್ನ ಮೊದಲನೆಯ ಐತಿಹಾಸಿಕ ಕಾದಂಬರಿ. ಮೊದಲನೆಯದು, ಕೊನೆಯದಲ್ಲ. ಕನ್ನಡನಾಡಿನ ಗತಕಾಲವನ್ನೆಲ್ಲ ಕಾದಂಬರಿಗಳ