ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದೆ ಕೊಡಗು


ಅಲ್ಲಿ ರಾತ್ರಿ, ಗೆಳೆಯರ ಬಳಗದಲ್ಲಿ ಆ ಮಾತು ಈ ಮಾತು ಹೊರಟಾಗ, ಒಂದು ಪ್ರಮಾದ ಸಂಭವಿಸಿತು. ಕುಡಿದು ಅಮಲೇರಿದವನೊಬ್ಬ ಅರಸನ ವಿಷಯವಾಗಿ ಲಘುವಾಗಿ ಮಾತನಾಡಿದ. ಅಲ್ಲಿಯೇ ಆತನ ಕೆನ್ನೆಗೆ ಏಟು ಬಿಗಿದ ಬಸವರಾಜಪ್ಪ. ಆದರೆ ಬೆಳಗಾಗುವುದರೊಳಗೆ ಬಸವರಾಜಪ್ಪನ ಕೊಲೆಯಾಗಿತ್ತು. ನಿದ್ದೆ ಹೋಗಿದ್ದವನ ಕತ್ತನ್ನೆ ಕಡಿದುಬಿಟ್ಟಿದ್ದರು. ಹಿಂದಿನ ರಾತ್ರೆ ಆತನಿಂದ ಅವಮಾನಿತನಾದವನ ಹಾಗೂ ಆತನ ಇಬ್ಬರು ಸಂಗಡಿಗರ ಪತ್ತೆಯೇ ಇರಲಿಲ್ಲ. ಅವರು ಆ ದೇಶವನ್ನೇ ಬಿಟ್ಟು ಮೈಸೂರಿನ ಕಡೆಗೆ ಓಡಿರಬೇಕೆಂಬುದು ಸ್ಪಷ್ಟವಾಗಿತ್ತು....

. ಕರುಳು ಕಿತ್ತು ಬರುವಂತೆ ರೋದಿಸುತ್ತಿದ್ದ ಆ ಇಬ್ಬರು ಹೆಂಗಸರನ್ನೂ 'ಅವ್ವಾ, ಅಜ್ಜೀ' ಎನ್ನುತ್ತ ಆಳುತಿದ್ದ ಎಳೆಯ ಹುಡುಗಿಯನ್ನೂ ಸಂತೈಸಲೆತ್ನಿಸುತ್ತ ಓಲೆಕಾರ, ರಾಜರ ಇಸ್ತಿ ಹಾರನ್ನು ಓದಿ ಹೇಳಿದ್ದ.


ಅರಸರ ವಿಶೇಷ ಕರುಣೆಗೆ ಆ ಸಂಸಾರ ಪಾತ್ರವಾಗಿತ್ತು.ಆ ಪ್ರದೇಶವನ್ನೆಲ್ಲ ಬಸವರಾಜಪ್ಪನ ಕುಟುಂಬಕ್ಕೆ ಉಂಬಳಿಯಾಗಿ ರಾಜರು ಬಿಟ್ಟು ಕೊಟ್ಟಿದ್ದರು. ಒಂದು ಸಾವಿರ ವರಹದ ಹಣವಿತ್ತು ಜತೆಯಲ್ಲಿ.....


ಅದು ಎನಿದ್ದರೇನು? ಎಷ್ಟಿದ್ದರೇನು? ಹೆತ್ತತಾಯಿಗೆ ಮಗ ದೊರೆತನೆ? ಕಾಲನ ದೂತರು ಕಸಿದುಕೊಂಡಿದ್ದ ತನ್ನ ಕರಿಮಣಿಭಾಗ್ಯ ಮತ್ತೆ ಬಂತೆ? ವೀರಮ್ಮನಿಗೆ ತಂದೆ ಬಂದನೆ? ತನ್ನ ಬಸಿರಲ್ಲಿದ್ದ ಶಿಶುವಿಗೆ____


ಹಾಗೆ ಗಂಗವ್ವನಿಗೆ ಪುಟ್ಟಬಸವ ಹುಟ್ಟಿದ. ವೀರನೆಂದು ಹೆಸರಾಗಿದ್ದ ತಂದೆಯ ಮುಖವನ್ನೆ ಕಂಡರಿಯದ ಮಗು. ತನ್ನ ಮಗನೆ ಸೊಸೆಯ ಬಸಿರಲ್ಲಿ ಮತ್ತೆ ಜನ್ಮವೆತ್ತಿದನೆಂದು ಮುದುಕಿ ಭಾವಿಸಿ ಪುಟ್ಟ ಬಸವನ ಲಾಲನೆಪಾಲನೆ ಮಾಡಿದಳು. ಆ ಹುಡುಗ ಅಜ್ಜಿಯ ಬಾಯಿಯಿಂದ ಕೇಳಿದುದೆಲ್ಲ, ತಂದೆಯ ಸಾಹಸದ ವೀರ ಕಥೆಗಳನ್ನೇ.


ತೊದಲುಪದ ಮಾತಾಗಿ ಮಾರ್ಪಟ್ಟ ಮೊದಲಿನಿಂದಲೆ ಪುಟ್ಟಬಸವ ಹೇಳುತಿದ್ದ:


ದೊಡ್ಡೋನಾದಾಗ ನಾನು ರಾಜರ ಕಡಗೆ ಓಗ್ತೀನಿ. ಕುದುರೆ ಮೇಲೆ ಕುಂತ್ಕೋತೀನಿ. ನನ್ನ ಅಪ್ಪನ್ನ ಕೊಂದೋರ ಜತೆ ಯುದ್ಡ ಮಾಡ್ತೀನಿ.'