ಈ ಪುಟವನ್ನು ಪರಿಶೀಲಿಸಲಾಗಿದೆ

ಹರದಾರಿ ಸಮೀಪದವರೆಗೂ ಒಮ್ಮೆ ಬಂದಿದ್ವಿ, ಅಷ್ಟೆ.”

ಮಹಾರಾಜರಿದ್ದಾಗ - ಎಂದಿದ್ದ ನಂಜಯ್ಯ. ಪುಟ್ಟಬಸವ ದೃಷ್ಟಿ ಎತ್ತಿ ಆತನ ಮುಖವನ್ನು ನೋಡಿದ.

ನಂಜಯ್ಯನ ಮಾತು ಗಂಗವ್ವನನ್ನು ಗೊಂದಲದಲ್ಲಿ ಕೆಡವಿತು. ಪ್ರಾಯಶಃ ಗತಿಸಿದ ಮಹರಾಜರ ವಿಷಯ ಆತ ಹೇಳುತ್ತಿರಬೇಕು ಎಂದು ಆಕೆ ಸುಮ್ಮನಾದಳು.

ಆದರೆ ನಂಜಯ್ಯನ ಮಾತಿನ ಕುದುರೆ ಆಗಲೆ ಮುಂದಕ್ಕೆ ಹೆಜ್ಜೆ ಇಟ್ಟಿತ್ತು

“ಆ ಸಲದು ಎಂಥಾ ಬೇಟೆ! ನಿನಗೆ ನೆನಪೈತೆ ಅಲ್ವಾ ಚೆಟ್ಟ ?”

“ ಹೂಂ," ಎಂದ ಚೆಟ್ಟಕುಡಿಯ. ಧ್ವನಿಯಲ್ಲಿ ಉತ್ಸಾಹವಿರಲಿಲ್ಲ. ಹತಾಶನಾದ ಮನುಷ್ಯ, ಕಳೆದು ಹೋದ ವಿಷಯವನ್ನು ಕುರಿತು ಉದಾಸೀನಭಾವ ತಳೆದಂತಿತ್ತು ಆತನ ವರ್ತನೆ.

ನಂಜಯ್ಯ ಅದನ್ನು ಗಮನಿಸದೆಯೆ ಮುಂದುವರಿದ:

"ಅದೊಂದು ಪೋಲಿ ಆನೆ ಬಹಳ ತೊಂದರೆ ಕೊಡ್ತಿತ್ತು. ಎಷ್ಟು ಸರ್ತಿ ತಪ್ಪಿಸ್ಕೊಂಡಿತ್ತೂಂತ. ಆ ಸಲ ರಾಜರು ಅದನ್ನು ಗುಂಡು ಹಾಕಿ ಸಾಯಿಸಿದ್ರು, ವೀರಾಗ್ರಣಿ ! ನಾಲ್ವತ್ತು ದಿವಸಗಳಲ್ಲಿ ಇನ್ನೂರ ಮೂವತ್ತ ಮೂರು ಆನೆಗಳನ್ನು ಮಹಾರಾಜರು ಸ್ವತಃ ತಾವೇ ಬೇಟೆಯಾಡಿ ಕೊಂದರು ಅಂದರೆ ನಂಬ್ತೀಯಾ ಅವ್ವ? ಎಂಥ ಧೈರ್ಯಶಾಲಿ ! [ಸ್ವರ ತಗ್ಗಿತು, ಕಂಠ ಗದ್ಗದಿತವಾಯಿತು] ಆದರೆ ನಾವು ಪಾಪಿಗಳು- ನಮಗೆ ಭಾಗ್ಯವಿಲ್ಲ...."

ಗಂಗವ್ವನಿಗೆ ಕಸಿವಿಸಿಯಾಯಿತು. ಆನೆಯ ಬೇಟೆಯಲ್ಲಿ ಮಹಾರಾಜರು ಮಹಾ ಚತುರರೆಂದು ಪುಟ್ಟಬಸವ ಹಿಂದೆಯೇ ಒಂದೆರಡು ಸಾರೆ ಹೇಳಿದ್ದುದು ನೆನಪಿತ್ತು ಆಕೆಗೆ. ಸಂಶಯ ನಿವಾರಣೆಯಾಗಲೆಂದು ಗಂಗವ್ವ ಕೇಳಿದಳು:

“ ಯಾವ ಮಹಾರಾಜರ ವಿಷಯ ಹೇಳ್ತೀದೀರಪ್ಪಾ ?"

ಆ ಪ್ರಶ್ನೆ ವಿಚಿತ್ರವಾಗಿ ತೋರಿತು ನಂಜಯ್ಯನಿಗೆ.

" ಯಾವ ಮಹಾರಾಜರು? ಚಿಕ್ಕವೀರರಾಜರು. ಇನ್ಯಾರು ?"

ಗಂಗವ್ವ ಕಾತರಗೊಂಡಳು. ಅರಸರು ಆರೋಗ್ಯದಿಂದಿರುವರೆಂದೇ