ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ

ಬೇಡ..ಎನ್ನುವುದುಂಟೆ ಮುತ್ತುಭಟ್ಟ? ಉತ್ತರವೀಯಲು ಯೋಗ್ಯ ಪದಗಳಿಗಾಗಿ ಆತ ತಡವರಿಸುತಿದ್ದಂತೆ ಟೇಯ್ ಲರ್ ಹೇಳಿದ :

"ನೀವು ನಮಗೆ ಉಚಿತವಾಗಿ ನಮ್ಮ ಫಿರಂಗಿ ಎಳೆಯುವುದಕ್ಕೊಸ್ಕರ ಒಂದು ಜತೆ ಒಳ್ಳೆ ಹೋರಿ ಕೊಡಬೇಕು."

"ನಮ್ಮ ಮಹಾರಾಜರಿಗೆ ತಿಳಿಸ್ತೇನೆ. ಅವರು ಖಂಡಿತವಾಗಿ ಒಪ್ಪಬಹುದು."

"ಹಾಗೇ ಮಾಡಿರಿ."

ಬಳಿಕ ತನ್ನ ಸೇವಕರನ್ನು ಕುರಿತು ಆತನ ಆಜ್ಞೆ  :

"ಯಾರಲ್ಲಿ ? ರಾಜಮರ್ಯಾದೆಯಿಂದ ಇವರನ್ನು ಕಳಿಸಿಕೊಡಿ!"

...ಹಾಗೆ ಕೊಡಗಿಗೆ ಬಂತು ಇಂಗ್ಲಿಷರ ಕುದುರೆ.ಕೊಡಗಿನ ಹೋರಿಗಳು ಬಯಲು ಭೂಮಿಗಿಳಿದು ಅವರ ಫಿರಂಗಿಗಳನ್ನೆಳೆದವು.

ಮೊದಲು ಒಂದು ಕುದುರೆ. ಬಳಿಕ ಹಲವಾರು.

ಅವರ ಫಿರಂಗಿಯೂ ಅಷ್ಟೆ. ಮೊದಲು ಒಂದು, ಬಳಿಕ ಹಲವಾರು.

ವಿಶ್ವಾವಸು ಸಂವತ್ಸರದಲ್ಲಿ [೧೬೯೦ನೆಯ ಇಸವಿ] ಟೇಯ್ ಲರ್ ವೀರರಾಜೇಂದ್ರನನ್ನು ತಲಚೇರಿಗೆ ಕರೆದ. ಸ್ನೇಹ ಹಸ್ತ; ಆಧುನಿಕರಾದ ಆಂಗ್ಲರ ಪರಿಚಯ;ಸರಿಸಮಾನರಾಗಿ ನಿಂತು ಸಂಭಾಷಣೆ.

"ನೋಡಿ ಮಹಾರಾಜರೆ, ಆ ಟಿಪ್ಪು ನಿಮಗೂ ವೈರಿ,ನಮಗೂ ವೈರಿ,ಆದ್ಧರಿಂದ ನಾವಿಬ್ಬರೂ ಮಿತ್ರರಾಗುವುದು ಸ್ವಾಭಾವಿಕ. ನಾನು ಹೇಳಿದ್ದು ಸರಿಯಷ್ಟೆ?ನೋಡಿ. ನಮ್ಮ ಕಂಪೆನಿ ನಿಮಗೆ ಪೂರ್ಣ ರಕ್ಷಣೆ ಕೊಡುತ್ತ ದೆ. ನಾವಿಬ್ಬರೂ ಒಂದು ಒಪ್ಪಂದ ಮಾಡಿಕೊಂಡುಬಿಡುವ. ಏನು ಹೇಳುತ್ತೀರಿ?"

ಟಿಪ್ಪುವಿನ ಮೇಲೆ ಏರಿಹೋಗಲು ಹಾದಿಯಿದ್ದುದು ಕೊಡಗಿನ ಮೂಲಕವಾಗಿಯೆ. ಆ ಕಾರಣದಿಂದಲೆ ಕೊಡಗಿನ ರಾಜರ ಸ್ನೇಹ ಬೇಕಾಗಿತ್ತು ಬ್ರಿಟಿಷರಿಗೆ. ಟಿಪ್ಪುವನ್ನು ಸೋಲಿಸಿದ ಬಳಿಕ ---

"ಆ ಒಳಮರ್ಮವನ್ನು ತಿಳಿಯಲಿಲ್ಲ ವೀರರಾಜೇಂದ್ರ. ಕಂಪೆನಿಯ ರಕ್ಷಣೆ ಎಂದರೆ ತನ್ನ ಸ್ವಾತಂತ್ರ್ಯ ನಷ್ಟವಾಗುವುದೇನೋ, ಎಂದು ಮಾತ್ರ ಆತ ಅಳುಕಿದ.