ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಸ್ನೇಹದ ಒಡಂಬಡಿಕೆ ಎಂದು ಅದನ್ನು ಕರೆದವರು ಯಾರು? ರಾಜರ ಧ್ವಜ ಇಳಿದು ಬ್ರಿಟಿಷರ ಧ್ವಜ ಕೋಟೆಯ ಮೇಲೇರಿತು. ನಾಲ್ಕುನಾಡು ಅರಮನೆಯಿಂದ ಹಿಂತಿರುಗಿದ ವೀರರಾಜೇಂದ್ರ ರಾಜಕೈದಿಯಾದ! ಕೊಡಗುದೇಶವನ್ನು ಇನ್ನೂರು ವರ್ಷಗಳಿಗೂ ಮೇಲ್ಪಟ್ಟು ಆಳಿದ್ದ ರಾಜಮನೆತನವನ್ನು ಆಂಗ್ಲರು ಹೀಗೆ ಮೂಲೆಗೊತ್ತಿದರು. ಗುಲಾಮಗಿರಿಯನ್ನೆ ಅರಿಯದ ಜನಾಂಗದ ಬಾಹುಗಳ ಕೈಗೆ ಅವರು ಬೇಡಿ ತೊಡಿಸಿದರು.ಬಾಯಿಗೆ ಅರಿವೆ ತುರುಕಿಸಿ,ಅಂಗಾತ ಮಲಗಿಸಿ ಶರೀರದ ಮೇಲೆ ಕರಿಯ ಮುಸುಕೆಳೆದರು.

ಕುತ್ತಿಗೆಯ ನರಗಳು ಬಿಗಿದು ಬಂದು ನಂಜಯ್ಯನ ಬಾಯಿಯಿಂದ ಮುಂದೆ ಮಾತು ಹೊರಡಲಿಲ್ಲ.ಆತ ತುಟಿಗಳನ್ನು ಬಿಗಿಹಿಡಿದು ನಿಟ್ಟುಸಿರುಬಿಟ್ಟ.ಎಲ್ಲರೂ ಮೌನವಾಗಿದ್ದರು. ಗಾಳಿಯೂ ಸ್ತಬ್ಧವಾಗಿತ್ತು.ಚಂದ್ರನ ಶೀತಲ ಕಿರಣಗಳು ಮಾತ್ರ ಕುಳಿತಿದ್ದವರ ಮೈಯನ್ನು ಕೊರೆದುವು.