ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊನೆಯೇ ಇಲ್ಲವೇನೊ ಎಂದು ಕಂಡ ಎರಡು ನಿಮಿಷಗಳ ಮೌನವನ್ನು ಸೋಮಯ್ಯನ ಮಾತುಗಳು ಮುಕ್ತಾಯಗೊಳಿಸಿದುವು. "ಇನ್ಯಾರಾದರೂ ಹೇಳಿದ್ದರೆ ಈ ಸುದ್ದಿಯನ್ನು ನಾವು ನಂಬುತ್ತೇ ಇರಲಿಲ್ಲ. ಯುದ್ಧದಲ್ಲಿ ಸೋಲದೆಯೇ ಇನ್ನೊಬ್ಬರಿಗೆ ಶರಣಾಗೋದು ಅಂದರೇನು? ದೇಶ ಭಾಷೆ ತಿಳೀದ ಹೊರಗಿನೋರು ಬಂದು ನಮ್ಮನ್ನು ಆಳೋದು ಅಂದರೇನು? ನಮ್ಮ ಜನರ ವೀರರ ಹುಟ್ಟೇ ಅಡಗಿ ಹೋಯ್ತೇನು ಹಾಗಾದರೆ ?

ನಮ್ಮ ಜನಕ್ಕಿಷ್ಟು, ಬೆಂಕಿ !”

ಸೋಮಯ್ಯನನ್ನೆ ನೆಟ್ಟದೃಷ್ಟಿಯಿಂದ: ನೋಡುತ್ತ ನಂಜಯ್ಯನೆಂದ: "ವೀರರು ವಿರಾಗಿಗಳಾದರು. ಹೇಡಿಗಳೇ ಈಗ ಮಹಾನುಭಾವರು. ತಾಯಿನಾಡಿಗೆ ದ್ರೋಹ ಬಗೆದ ಧೂರ್ತರೇ ರಾಜಕಾರಣಿಗಳು. ಹುಂ !” "ಈ ದರ್ಬಾರು ಮೂರು ದಿವಸಕ್ಕಿಂತ ಜಾಸ್ತಿ ಇರೋದಿಲ್ಲ," ಎಂದನೊಬ್ಬ. "ಭೇಷ್ ಕರಿಯಪ್ಪ, ಸರಿಹೇಳ್ದೆ!” ಎಂದು ಕೇಳಿಸಿತು ಇನ್ನೊಂದು ಸ್ವರ. ಚೆಟ್ಟಿ-ಕರ್ತು ಕುಡಿಯರು ಬೆನ್ನು ಸಿಡಿದು ಕುಳಿತರು. ಅಲ್ಲಿದ್ದ 'ಜನರ ಮನೋಭಾವ ಕಂಡು ಸಂತೋಷವಾಯಿತು ಅವರಿಗೆ. ಪ್ರತಿಯೊಂದನ್ನೂ ಗಮನಿಸುತ್ತ ಕುಳಿತಿದ್ದ ಪುಟ್ಟಬಸವನೆಂದ: " ಪರಕೀಯರ ಧ್ವಜ ಮೇಲೇರಿದ ಮೇಲೆ ಏನಾಯ್ತು ಹೇಳಿ ನಂಜಯ್ಯವರೆ." ಸೋಮಯ್ಯನೂ ಧ್ವನಿಕೂಡಿಸಿದ: "ಹೇಳಿ, ಮುಂದೇನಾಯ್ತೂಂತ ತಿಳಿಸಿ." ನಂಜಯ್ಯ ಮೊದಲಿನಂತೆಯೆ, ಒಂದು ನಿಮಿಷ ನೆಲವನ್ನೆ ನೋಡುತ್ತಲಿದ್ದು ಬಳಿಕ ತಲೆಯೆತ್ತಿ ನುಡಿದ: " ಬೀದಿಯ ಮಾರಿ ಮನೆ ಸೇರಿದ್ಮೇಲೆ.... "