ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮೦ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು 'ಕಾಗಿನೆಲೆಯಾದಿಕೇಶವ'ನ ಅಂಕಿತವಿರುವ ಈ ಗೀತೆಗಳೂ ಕಾಲದ ಒತ್ತಾಸೆಯಿಂದಲೇ ಹುಟ್ಟಿರುವಂಥವುಗಳು. ಈ ಕವಿತೆಗಳನ್ನು ಕುರಿತಂತೆ ಮತ್ತೆ ಸಂಗತಿಗಳನ್ನು ಪ್ರಸ್ತಾವಿಸಬಹುದು. ಕೇಳುವವರಿಗೆ ಅನುಕೂಲ ಕಲ್ಪಿಸುವ ಗೀತೆಗಳಿವು. ಸರಳವಾದ ಆಕೃತಿಯುಳ್ಳ ಈ ಗೀತೆಗಳು ಪುನರಾವೃತ್ತಿಯನ್ನು ಬಯಸುತ್ತವೆ. ಈ ಗೀತೆಗಳು ನಾಟಕೀಯ ನಿರೂಪಣೆಯ ಕ್ರಮವನ್ನು ಹೊಂದಿವೆ. ಹೆಚ್ಚಿನ ಸಂದರ್ಭಗಳಲ್ಲಿ ಆರಂಭದಲ್ಲಿ ಪ್ರಾಸವಿರುವ ಈ ಕವಿತೆಗಳು ಶೈಲಿಯ ಐಕ್ಯತೆಯನ್ನು ಸೂಚಿಸುತ್ತವೆ. ಜನಪದ ಕವಿಗಳೂ ಬಯಸುವ ಫಾಲ್ಕುಲಾದಂತೆ ಇವು ಕೂಡಾ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿವೆ. ಹಾಡುವ ಅನುಕೂಲಕ್ಕೆ ತಕ್ಕಂತಿರುವ ಈ ಕವಿತೆಗಳ ಮಟ್ಟವನ್ನು ಮೌಖಿಕ ಪರಂಪರೆಯ ಮಟ್ಟುಗಳಲ್ಲಿಯೂ ಕಾಣಬಹುದು. ಕನಕದಾಸರ ಗೀತೆಗಳ ಈ ಚರ್ಚೆಗೆ ಪೂರಕವಾಗಿ ಒಂದು ಉದಾಹರಣೆಯನ್ನು ಕೊಡಬಹುದು : ಯಮದೂತರಿನ್ನೇನ ಮಾಡುವರು. ಪೇಳೂ | ರಮೆಯರಸನೆ ನಿನ್ನ ಅರಿಕೆಯುಳ್ಳವರಿಗೆ || ಪ || ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನ | ಗಂಡನರಿಕೆಯಿಂದ ವ್ಯಭಿಚಾರಗೈಯೆ || ಮಂಡಲ ಪತಿಯೂ ಶೋಧಿಸಿ ಹಿಡಿದೆಳೆತಂದು | ಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ ॥ ೧ ॥23 ಈ ರೀತಿಯ ಕೀರ್ತನೆಗಳನ್ನು (ಕೀರ್ತನೆಯೆಂದರೆ-ಹೊಗಳುವ ಕಾವ್ಯ, ಹೊಗಳುವ ಸಂಗೀತ ಮತ್ತು ಹಾಡಿನ ಮೂಲಕ ಆಚರಿಸುವ ಆಚರಣೆ) 24 ಜನಸಾಮಾನ್ಯರೆದುರು ಹಾಡುತ್ತಿದ್ದರು ಎಂದು ಈಗಾಗಲೇ ಗ್ರಹಿಸಲಾಗಿದೆ. ಹಾಡುವ ರಚನೆಯ ಸ್ವರೂಪವು ಸೂತ್ರಪ್ರಾಯವಾಗಿರುತ್ತದೆ. ಲಿಖಿತ ಪರಂಪರೆಯಲ್ಲಿ ಹೇಳುವವನ ಸಹಿ ಇರುತ್ತದೆ.25 ಕೊಡುವ ರೀತಿಯ ಸ್ವರೂಪವು ಆಕಸ್ಮಿಕವಾದುದು ಅರ್ಥದ ಅನೇಕ ಆಯಾಮಗಳು ಈ ರಚನೆಗಳಲ್ಲಿ ದೊರೆಯುತ್ತವೆ. ಪರಿಪೂರ್ಣವಾದ ರೂಪದಲ್ಲಿ ವ್ಯಕ್ತವಾಗುತ್ತವೆ. ಹಾಡುಗಳು ಹಿಗ್ಗುವುದು ಹೀಗೆ. ಆಕಸ್ಮಿಕವಾಗಿ ಹುಟ್ಟಿದ ಕನಕದಾಸರ ಕೀರ್ತನೆಗಳಲ್ಲಿ ಮೌಖಿಕ ವರ್ಗಾಂತರವಿದೆ. ಅಂದರೆ : ಕೇಳುವವರಿಗೆ ಇದು ನೇರವಾಗಿ ತಲುಪಿ ಬಿಡುತ್ತದೆ. ಅನಂತರ ಮತ್ತೊಂದು ಅಂಶವೆಂದರೆ, ತಕ್ಷಣಕ್ಕೆ ಈ ರಚನೆಯ ನಿರಾಣವಾಗುತ್ತದೆ. ಹೀಗಾಗಿ ಮೌಖಿಕ ಸೃಷ್ಟಿ ಮತ್ತು ಮೌಖಿಕ ಅಭಿವ್ಯಕ್ತಿಯು ಕನಕದಾಸರ ಕೀರ್ತನೆಗಳ ಲಕ್ಷಣವಾಗಿದೆ. ಮುದ್ರಿತ ಸಂಸ್ಕೃತಿಯೂ ಬಂದಾಗ ಈ ರೀತಿಯ ಮೌಖಿಕ ರಚನೆಯ ಸ್ವರೂಪವು ಒಂದೆಡೆಗೆ ಅಂಟಿಬಿಡುತ್ತದೆ. ಈ ರೀತಿಯಲ್ಲಿ ಮೌಖಿಕ ಪರಂಪರೆಯ ಕಾವ್ಯಸ್ಥಿತಿಯು ತತ್ಕಾಲೀನ ಸ್ಥಿತಿಯನ್ನು ದಾಟಿ ಒಂದೆಡೆಗೆ ಅಂಟುವಾಗ ಸಹಜವಾಗಿಯೇ ರಚನೆಯ ಸ್ವರೂಪವೂ ನಿರ್ದಿಷ್ಟವಾಗುತ್ತದೆ. ಕನಕ ದಾಸರ ಕೀರ್ತನೆಗಳು ಈಗಾಗಲೇ ಹೇಳಿರುವಂತೆ ಶೋತೃವೃಂದವನ್ನು ಅವಲಂಬಿಸಿರುವಂತಹುದು. ಸಹಜವಾಗಿಯೇ ಈ ರೀತಿಯ ರಚನೆಯ ಬಿಟ್ಟು ಸ್ವರೂಪವು ಹೀಗಿದೆ : ಹೇಳುವವನು ಕೇಳುವವನು ಮತ್ತು ರಚನೆಯು ಏಕತ್ರ ಸ್ಥಿತಿಯಲ್ಲಿ ಒಂದಾಗುತ್ತಿರುತ್ತದೆ.26 ಒಂದೇ ಕಾಲಕ್ಕೆ ಸಂಬಂಧಿಸಿದಂತೆ ಈ ರಚನೆಯು ಅಭಿವ್ಯಕ್ತವಾಗುತ್ತದೆ. ಸಹಜವಾಗಿಯೇ ಈ ರಚನೆಗಳಿಗೆ 'ಕಾಲ'ದ ಆಯಾಮ ಕೂಡಾ ಬಂದಿದೆ. ಮುದ್ರಿತ ಸಂಸ್ಕೃತಿಯು ರಚನೆಗಳನ್ನು ಕಾಲದ ಅಂತರದ ಆಚೆಗೆ ದಾಟುವಂತೆ ಮಾಡಿದ ಹಾಗೆಯೇ ಅದಕ್ಕೆ ಅನೇಕ ಅನ್ವಯಗಳು ರೂಪುಗೊಳ್ಳುತ್ತವೆ. ಮೌಖಿಕ ಸಂಪ್ರದಾಯದ ರಚನೆಗಳಲ್ಲಿ ಸಹಜವಾಗಿಯೇ ಹೊಸ ರೀತಿಯ ನುಡಿಗಟ್ಟುಗಳು ತನ್ನ ಸಂದರ್ಭಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತವೆ. ಕನಕದಾಸರ ರಚನೆಯೊಂದರಲ್ಲಿ ಇದನ್ನು ಕಾಣಬಹುದು : “ನೇಮವಿಲ್ಲದ ಹೆಣ್ಣೆ ಗಜುಗ ಬೆಳೆದ ಕಣ್ಣೆ.”೨೭ ಸ್ತೋತ್ರರೂಪದ 'ಹರಿಭಕ್ತಿಸಾರ' ಮತ್ತು ಹಾಡಲು ಅನುಕೂಲ ಕಲ್ಪಿಸುವ 'ರಾಮಧಾನ್ಯ ಚರಿತ್ರೆ'ಯೂ ಕೂಡಾ ಈ ಮೊದಲು ಸೂಚಿಸಿದ ಅರ್ಥಗಳನ್ನು ಪ್ರತಿಪಾದಿಸುತ್ತವೆ. ಕನಕದಾಸರ ಒಟ್ಟು ಸಾಹಿತ್ಯವನ್ನು ಲಕ್ಷಿಸಿ ಮತ್ತೆ ಕೆಲವು ಅಂಶಗಳನ್ನು ಸ್ಪಷ್ಟ ಪಡಿಸಬಹುದು : ಎಲ್ಲಾ ಕೃತಿಗಳಲ್ಲಿಯೂ ಕನಕದಾಸರು ತಮ್ಮ ಗ್ರಹಿಕೆಯ ಮೂಲಕ ಒಟ್ಟು ಸಂದರ್ಭವನ್ನು ನಿರೂಪಿಸುತ್ತಾರೆ. ಇದರಲ್ಲಿ ಕನಕದಾಸರ ವೈಯಕ್ತಿಕ ದೃಷ್ಟಿ ಮತ್ತು ಚಾರಿತ್ರಿಕ ಸಂದರ್ಭದ ಪ್ರೇರಣೆಯು ಮುಖ್ಯವಾಗಿದೆ. ಕನಕದಾಸರು ತಮ್ಮ ಕೃತಿಗಳ ಮೂಲಕ ಸೂಚಿಸುವ ನೆಲೆಯು ಒಟ್ಟು ಸಮಾಜದ ನಂಬಿಕೆಯನ್ನು ಪ್ರತಿಪಾದಿಸುವಂತಹುದು. ಇದರರ್ಥ ಕನಕದಾಸರು ತತ್ಕಾಲೀನ ಸಮಾಜವನ್ನು ತೀರಾ ಸರಳವಾಗಿ ಸ್ವೀಕರಿಸಿದ್ದಾರೆಂದಲ್ಲ. ಇದಕ್ಕೊಂದು ಅಲೌಕಿಕದ ಶಾಬಿಕ ಬೆಳಕು ಇದೆ.