ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ ೯೯೩ ಸಾಮಂತರೂ ಲೋಭ, ಮೋಹ, ಅಧಿಕಾರಲಾಲಸೆಗೆ ತುತ್ತಾದುದು ಸಹಜವೇ ಆಗಿದೆ. ಸಂಗಮ, ಸಾಳುವ, ತುಳುವ ವಂಶಜರ ಆಳಿಕೆಯ ಅವಧಿಯಲ್ಲಿ ವಿಜಯನಗರದ ಅರಮನೆಯ ಒಳಗೂ ಹೊರಗೂ ಮೇಲಿಂದ ಮೇಲೆ ನಡೆದುಹೋದ ಒಳಸಂಚುಗಳ, ರಾಜಹತ್ಯೆ, ಶಿಶುಹತ್ಯೆಗಳ, ಸಿಂಹಾಸನದ ದುರಾಕ್ರಮಣಗಳ, ಸ್ವಜನಪಕ್ಷಪಾತದ ಘಟನೆಗಳು ವಿಜಯನಗರದ ಇತಿಹಾಸವನ್ನು ಬಲ್ಲವರಿಗೆ ಸುಪರಿಚಿತವಷ್ಟೆ. ಹೀಗೆ ಅಕ್ರಮವಾಗಿ ಸಿಂಹಾಸನಾರೂಢರಾದ ಚಕ್ರವರ್ತಿಗಳೂ, ಸಾಮಂತ ಅರಸುಗಳೂ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸಾಮಾಜ್ಯದ, ಜನತೆಯ ಹಿತವನ್ನು ಕಡೆಗಣಿಸಿ, ರಾಜಧರ್ಮವನ್ನು ಕೈಬಿಟ್ಟು ವರ್ತಿಸಿರುವ ನಿದರ್ಶನಗಳು ವಿಜಯನಗರದ ಇತಿಹಾಸದಲ್ಲಿ ಹಲವಿವೆ. ಇಂತಹ ಅನಿಷ್ಟ ಘಟನೆಗಳು ನಡೆದ ಕಾಲಕ್ಕೆ ಸೇರಿದ ಕನಕದಾಸರು 'ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು' (೧೪-೨) ಎನ್ನುತ್ತಾರೆ. ಸಂಚುಗಾರರ ಸಹಾಯದಿಂದ ಆಕ್ರಮಿಸಿಕೊಂಡ ಸಿಂಹಾಸನವನ್ನು ಉಳಿಸಿಕೊಳ್ಳಲು ಈ ಅರಸುಗಳು ಆ ಸಂಚುಗಾರರನ್ನು ತೃಪ್ತಿಪಡಿಸುವುದು ಅನಿವಾರ್ಯವಿತ್ತು. ಅಂತಹ ಸ್ವಾರ್ಥಪರ ಪರೋಪ ಜೀವಿಗಳ ದುರಾಡಳಿತದಿಂದಾಗಿ ಸಾಮ್ರಾಜ್ಯದ ಸಿಂಹಾಸನವಂತೂ ಸಂಚುಗಾರರ ಆಡುಂಬೋಲವೇ ಆಯಿತು. ಈ ಹಿನ್ನೆಲೆಯಲ್ಲಿ 'ಸೇರಿ ದ್ರೋಹವ ಮಾಳ ಕ್ರೂರಕರ್ಮಿಗಳ ಮತ ಪೂರೈಸಿ ಕೊಡುವರರಸುಗಳೆಲ್ಲರು' (೧೨.೭) ಎಂಬ ಕನಕದಾಸರ ಆಪಾದನೆಯು ವಿಜಯನಗರ ಸಿಂಹಾಸನದ ಇತಿಹಾಸದ ಸಾರೋಕ್ತಿಯೇ ಹೌದು. ಹೀಗೆ ಅರಸು ಮನೆತನಗಳವರ ಅಸಹಾಯಕ ಪರಿಸ್ಥಿತಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ಅನೇಕ ವ್ಯಕ್ತಿಗಳ ಗುಂಪುಗಳ ಪರಿಚಯವನ್ನು ವಿಜಯನಗರ ಇತಿಹಾಸವು ನಮಗೆ ಒದಗಿಸಿರುತ್ತದೆ. ದುರ್ಬಲರಾದ ಅರಸುಗಳ ಪರಾವಲಂಬನೆಯ ಅಸಹಾಯಕ ಸ್ಥಿತಿಯಿಂದ ಲಾಭ ಪಡೆಯುತ್ತಿದ್ದ ಈ ಸಂಚುಗಾರರನ್ನು ಕುರಿತು ಕನಕದಾಸರು “ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆ - ಮಾಳಿಗೆಯ ಮನೆ ತುರುವು ಧನಧಾನ್ಯವು (೧೨. ೫) ಎಂದಿರುವುದು ಅಂದಿನ ಉಚ್ಚ ಮಟ್ಟದ ಅಧಿಕಾರಿಗಳನೇಕರಿಗೆ ಅನ್ವಯಿಸುತ್ತದೆಂಬುದನ್ನು ವಿಜಯನಗರ ಇತಿಹಾಸದ ಪುಟಗಳು ಸಾರಿಹೇಳುತ್ತವೆ. ಸಾಮಾಜ್ಯವು ವಿಸ್ತಾರ ಗೊ೦ಡ೦ತೆ ಅಧಿಕಾರ ವರ್ಗವೂ ವಿಸ್ತಾರಗೊಂಡುದುದು ಸಹಜವೇ ಆಗಿದೆ. ಇದರಿಂದಾಗಿ, ಅನೇಕ ಸ್ವಾಮಿನಿಷ್ಠರಲ್ಲದ, ಸ್ವಾರ್ಥಪರ ವ್ಯಕ್ತಿಗಳು ಆಡಳಿತದ ಎಲ್ಲ ಸ್ತರಗಳಲ್ಲೂ, ರಾಜಧಾನಿಯಲ್ಲೂ ನಗರಗಳಲ್ಲೂ, ಹಳ್ಳಿಗಳಲ್ಲೂ ನೇಮಕಗೊಂಡು, ಅವರುಗಳು ಅನ್ಯಾಯವಾಗಿ ಹೇರುತ್ತಿದ್ದ ಕರತೆರಿಗೆಗಳ ಭಾರವನ್ನು ಹೊರಲಾರದೆ ಊರಿಗೆ ಊರ ಮನೆಗಳನ್ನು ತೊರೆದು ಬೇರೆಡೆಗಳಿಗೆ ವಲಸೆ ಹೊರಟಂತಹ ಹಲವು ಘಟನೆಗಳನ್ನು ಆ ಕಾಲದ ಶಾಸನಗಳು ಪ್ರಸ್ತಾಪಿಸುತ್ತವೆ. ಇಂತಹ ಅನರ್ಹ ಅಧಿಕಾರಿಗಳು ಸಮಾಜಕಂಟಕ ಶಕ್ತಿಗಳ ಪ್ರೋತ್ಸಾಹಕರಿದ್ದರೆಂಬುದನ್ನು “ಕಳುವಿನ ಒಡವೆಯ ಒಡೆಯಗೆ ಪಾಲೀವ ಕಳು ಭಂಟ ಕನ್ನವ ಕೊರೆಯುತ್ತಿರೆ ಕಳವು ಮಾಡಿದನೆಂದು ಹಿಡಿದೆಳೆತಂದರೆ ತಳವಾರನೇನು ಮಾಡುವನೊ ಕೇಳೆಲೊ ಹರಿ' (೪೨, ೨) ಎಂಬ ಕನಕದಾಸರ ನುಡಿಯಿಂದ ನಾವು ತಿಳಿಯಬಹುದಾಗಿದೆ. - ಸನಾತನ ಧರ್ಮದ ಸಂರಕ್ಷಣೆಗೆಂದೇ ನಿರ್ಮಾಣಗೊಂಡ ವಿಜಯನಗರ ಸಾಮ್ರಾಜ್ಯದ ಆಳರಸನೂ ಅವರ ಅನುಯಾಯಿಗಳೂ ಹಿಂದೂ ಧರ್ಮದ ಮೂಲಭೂತಸ್ವರೂಪವಾದ ವರ್ಣ (ಜಾತಿ) ಧರ್ಮದ ಪೋಷಣೆಯ ಕಡೆಗೆ ವಿಶೇಷ ಗಮನ ಹರಿಸಿದ್ದರು, ವಿಜಯನಗರದ ಚಕ್ರವರ್ತಿಗಳನ್ನು ಆ ಕಾಲದ ಶಾಸನಗಳಲ್ಲಿ 'ಹಿಂದೂರಾಯ ಸುರತ್ರಾಣ'ರೆಂದೂ 'ಸಕಲವರ್ಣಧರ್ಮಾತ್ರ ಮಂಗಳನೂ ಪ್ರತಿಪಾಲಿಸುತಿಹವರೆಂದೂ, ಅವರ ಅಧಿಕಾರಿಗಳಲ್ಲಿ ಕೆಲವರನ್ನು “ವೇದಮಾರ್ಗಪ್ರತಿಷ್ಠಾಚಾರ್ಯ', 'ಉಪನಿಷನ್ಮಾರ್ಗ ಪ್ರತಿಷ್ಠಾಗುರು', 'ಉಪನಿಷನ್ಮಾರ್ಗ ಪ್ರವರ್ತನಾಚಾರ್ಯ' ಎಂದೂ ಬಣ್ಣಿಸಲಾಗಿದೆ. ಆದರೆ ವರ್ಣ (ಜಾತಿ) ಧರ್ಮವನ್ನು ಪೋಷಿಸುವಲ್ಲಿ ವಿಜಯನಗರದವರು ಅನುಸರಿಸಿದ ಕ್ರಮಗಳು ಹಿಂದಿನ ಕಾಲದ ಪದ್ಧತಿಗಳ ಅತ್ಯಧಿಕ ಪ್ರಮಾಣದ ಅನುಕರಣೆಗಳೇ ಆಗಿದ್ದ ಕಾರಣ, ಕೆಲವೊಂದು ಬೇರೂರಿದ ಸಾಮಾಜಿಕ ಅಸಮತೆಗಳು ಆ ಕಾಲದಲ್ಲಿ ಇನ್ನಷ್ಟು ಪ್ರಬಲವಾಗಿ ಬೆಳೆದವು. ಉದಾಹರಣೆಗೆವಿಜಯನಗರ ಯುಗದಲ್ಲಿ ಬ್ರಾಹ್ಮಣರಿಗಾಗಿ ರಾಜಾಶ್ರಯದಲ್ಲಿ ಸೃಷ್ಟಿಗೊಂಡ ಅಗ್ರಹಾರಗಳೂ, ಬ್ರಹ್ಮಸ್ವಗಳೂ ಸಾವಿರಾರು. ಇವೆಲ್ಲವನ್ನೂ ದತ್ತಿಯಾಗಿ ನೀಡುವಲ್ಲಿ ವೇದವೇದಾಂಗಪಾರಂಗತರಾದ, ಷಟ್ಕರ್ಮನಿರತರಾದ, ಅಂದಿನ