ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೦೭ ಕನಕಸೂಕ್ತಿ ಸಂಚಯ ಸಿ. ಕೆ. ಪರಶುರಾಮಯ್ಯ ಯಾರಾದರು ಒಂದು ಸಂದರ್ಭಕ್ಕೆ ಹೊಂದುವಂತಹ ಮಾತನಾಡಿದಾಗ ನಾವು ಸಾಮಾನ್ಯವಾಗಿ 'ಬಂಗಾರದಂತಹ ಮಾತು' 'ಚಿನ್ನದಂತಹ ನುಡಿ'ಎನ್ನುತ್ತೇವೆ. ಏಕೆಂದರೆ, ಆ ಮಾತು ಆ ಸಂದರ್ಭದ ಆಶಯವನ್ನು ಅಷ್ಟೊಂದು ಚೆನ್ನಾಗಿ ಮನದಟ್ಟು ಮಾಡಿರುತ್ತದೆ. ಹತ್ತಾರು ವಾಕ್ಯಗಳಲ್ಲಿ ಹೇಳಬೇಕಾದ ವಿಷಯ ಒಂದೆರಡು ನುಡಿಗಳಲ್ಲಿ ಅಡಕವಾಗಿರುತ್ತದೆ. ಆದ್ದರಿಂದಲೇ ಅಂತಹ ಮಾತುಗಳನ್ನು ನಾವು “ನುಡಿಮುತ್ತು” ಎಂದೂ ಕರೆಯುತ್ತೇವೆ. ವಿಶೇಷ ಹೊಳಪಿನಿಂದ ಶೋಭಿಸುವ ಈ ಮಾತುಗಳು ಸಾರ್ವಕಾಲಿಕವಾದ ಸತ್ಯವನ್ನು, ಜೀವನಮೌಲ್ಯವನ್ನು ಸಂದೇಶಿಸುತ್ತವೆ, ಉಪದೇಶಿಸುತ್ತವೆ. ಇಂತಹ ಬನಿಯಾದ, ಇನಿದಾದ ನುಡಿಗಳು ಎಲ್ಲ ಸಾಧಕರ, ಕವಿಗಳ, ಅನುಭಾವಿಗಳ ಕೃತಿಗಳಲ್ಲೂ ಹಾಸುಹೊಕ್ಕಾಗಿವೆ. ಇವು ಅವರ ಹೃದಯದಿಂದ ಹೂ ಅರಳಿದಂತೆ, ಬೆಳುದಿಂಗಳು ಚೆಲ್ಲಿದಂತೆ, ಮಳೆ ಸುರಿದಂತೆ ಹೊಮ್ಮಿಬರುತ್ತವೆ. ಭಾವ-ಭಾಷೆಗಳ ಸುಂದರ ಹೊಂದಾಣಿಕೆಯಿಂದ ಹೊರಬರುವ ಈ ನುಡಿಮುತ್ತುಗಳು ಮಾನವನ ಬದುಕಿಗೆ ಸೈರಣೆಸಮಾಧಾನಗಳನ್ನು ನೀಡುತ್ತವೆ. ಕನ್ನಡನಾಡಿನ ಸಂತ ಶ್ರೇಷ್ಠರಲ್ಲೊಬ್ಬರಾದ ಕನಕದಾಸರ ಕೃತಿಗಳಲ್ಲಿ ಇಂತಹ ನುಡಿಗಳು 'ಕನಕಸೂಕ್ತಿಯಾಗಿ ಪ್ರಸಿದ್ಧವಾಗಿವೆ. ಈ ಸೂಕ್ತಿಗಳು ಸಹಜಮೌಲ್ಯ ಮತ್ತು ಪ್ರಭೆಯಿಂದ ತುಂಬಿ “ಕನಕ' ಶಬ್ದದ ಅರ್ಥವನ್ನು ಸಾರ್ಥಕಗೊಳಿಸಿವೆ. ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ವ್ಯಾಸ-ಪುರಂದರದಾಸರನ್ನೊಳಗೊಂಡು ಹಲವಾರು ಹರಿದಾಸರು ಕೀರ್ತನೆಗಳನ್ನು ರಚಿಸಿ ಹೆಸರಾಗಿದ್ದಾರೆ. ಕನಕದಾಸರೂ ಕೀರ್ತನೆಗಳನ್ನು ರಚಿಸಿದ್ದಾರೆ. ಆದರೆ, “ಕನಕದಾಸರು ದಾಸರಲ್ಲಿ ಕವಿಗಳು ; ಅದೇ ಅವರ ವೈಶಿಷ್ಟ್ಯ. ಕನಕದಾಸರನ್ನು ಬಿಟ್ಟರೆ ದಾಸ ಪರಂಪರೆಯಲ್ಲಿ ಉಳಿದೆಲ್ಲರೂ ಪ್ರಧಾನವಾಗಿ ಕೀರ್ತನಕಾರರು : ಕವಿಗಳಲ್ಲ. ಎಂದರೆ, ಅವರ ಕೀರ್ತನೆಗಳಲ್ಲಿ ಕಾವ್ಯತ್ವವಿಲ್ಲವೆಂದು ಅರ್ಥವಲ್ಲ. ಆದರೆ ಅವರಲ್ಲಿ ಕನಕದಾಸರಲ್ಲಿಯಂತೆ ಸ್ಥಾಯಿಯಾದ ಕಾವ್ಯ ಪ್ರಜ್ಞೆ ಇಲ್ಲ ಎಂದು ಮಾತ್ರ ಅರ್ಥ. ಕನಕದಾಸರಲ್ಲಿಯಾದರೋ ಒಂದು ವೇಳೆ ಅವರು ದಾಸಕೂಟಕ್ಕೆ ಸೇರಿ ಕೀರ್ತನೆಗಳನ್ನು ರಚಿಸಬೇಕಾದಂತಹ ಪ್ರಸಂಗಕ್ಕೆ, ಪರಂಪರೆಗೆ ಒಳಗಾಗದೆ ಹೋಗಿದ್ದರೂ ಅವರಲ್ಲಿನ ಕವಿಪ್ರಜ್ಞೆ ಕಾವ್ಯರೂಪದಲ್ಲಿ, ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳದೆ ಇರುತ್ತಿರಲಿಲ್ಲ. ಹೀಗಾಗಿ ಕನಕದಾಸರ ವ್ಯಕ್ತಿತ್ವ ದಾಸ ಪರಂಪರೆಯ ಭಕ್ತಿಪ್ರಜ್ಞೆಗೆ ಒಳಗಾದರೂ, ಅವರ ಭಕ್ತಿಭಾವ ಕಾವ್ಯಪ್ರಜ್ಞೆಗೆ ಮೂಲ ಭಿತ್ತಿಯಾಗಿ ಪರಿಣಮಿಸಿತು. ಆದಕಾರಣ ಅವರು ಕೇವಲ ಕೀರ್ತನಕಾರರಾಗಿ ಮಾತ್ರವಲ್ಲದೆ, ಕನ್ನಡದ ಕವಿಗಳ ಸಾಲಿನಲ್ಲಿಯೂ ನಿಲ್ಲಬಲ್ಲವರಾಗಿದ್ದಾರೆ... ಕನಕದಾಸರು ತಮ್ಮ ಸುತ್ತಣ ಜೀವನದ ಬಗ್ಗೆ ಹೇಗೆ ಜೀವಂತಪ್ರಜ್ಞೆಯುಳ್ಳವರಾಗಿದ್ದರೋ ಅಷ್ಟರ ಮಟ್ಟಿಗೆ ತಮ್ಮ ಸುತ್ತಣ ಜನ ಭಾಷೆ ಯ ಬಗೆಗೆ ಎಚ್ಚರ ವನ್ನು ಕಾಯ್ದುಕೊಂಡಿದ್ದವರು. ಆದುದರಿಂದಲೇ ಅವರ ಕೃತಿಗಳ ಶೈಲಿ ಬಹುಮಟ್ಟಿಗೆ ದೇಶೀಯತೆಯ ಲಕ್ಷಣಗಳನ್ನು ತುಂಬಿಕೊಂಡಿದೆ. ಅವರ ಶೈಲಿಯಲ್ಲಿ ನಾಡೊಳಗುಳ್ಳ ಜಾಣಜಾಣೆಯರೊಡನಾಡುವ ಸವಿಮಾತುಗಳನ್ನು “ಪಾಡುಗಬ್ಬ”ವಾಗಿ ವಿಸ್ತರಿಸುವ ಜಾಣೆ ಕಂಡುಬರುತ್ತದೆ. ಅವರಲ್ಲಿ ಕೇವಲ ಸುಶಿಕ್ಷಿತ ಸಮಾಜದ ಭಾಷೆ ಮಾತ್ರವಲ್ಲ; ಅಶಿಕ್ಷಿತ ಸಮಾಜದ ಭಾಷೆಯೂ ಯಥಾವತ್ತಾಗಿ ಬಂದಿದೆ”-ಎಂಬ ಪ್ರೊ ಜಿ.ಎಸ್. ಶಿವರುದ್ರಪ್ಪನವರ ಸಮತೂಕದ ನುಡಿಗಳು ಸಂತ ಕವಿ ಕನಕದಾಸರ ವ್ಯಕ್ತಿತ್ವ ಮತ್ತು ಕವಿತ್ವದ ಹಿರಿಮೆಯನ್ನು ನಿರೂಪಿಸುತ್ತವೆ. ಕನಕದಾಸರ ಸೂಕ್ತಿಸೌರಭವನ್ನು, ಉಕ್ತಿಸ್ವಾರಸ್ಯವನ್ನು ಮೂರು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದು, ಅವರು 'ಮೋಹನ ತರಂಗಿಣಿ', “ನಳಚರಿತ್ರೆ' ಮತ್ತು 'ರಾಮಧಾನ್ಯ ಚರಿತ್ರೆ' ಕಾವ್ಯಗಳಲ್ಲಿ ಕವಿಯಾಗಿ ತೋರಿಸುವ ಪ್ರತಿಭಾವಿಲಾಸ, ಎರಡನೆಯದು, “ಕೀರ್ತನೆಗಳು', 'ಹರಿಭಕ್ತಿಸಾರ' ಕೃತಿಗಳಲ್ಲಿ ಹಾಗೂ ಮುಂಡಿಗೆಗಳಲ್ಲಿ ಸಾಧಕನಾಗಿ ತೋರಿರುವ ಅನುಭಾವಸಂಪತ್ತು. ಮೂರನೆಯದು, ಶ್ರೀ ವ್ಯಾಸರಾಯರು ಪಂಡಿತರ ಸಮ್ಮುಖದಲ್ಲಿ ಇರಿಸಿದ ಪ್ರಶ್ನೆಗಳಿಗೆ ಉತ್ತರರೂಪವಾಗಿ ನಿವೇದಿಸಿದ ಮಾರ್ಮಿಕವಾದ ಅರ್ಥದಿಂದ ಕೂಡಿದ ನುಡಿಗಟ್ಟುಗಳು, ಮೇಲಿನ ಈ ಮೂರೂ ಸಂದರ್ಭಗಳಲ್ಲಿ ಕನಕದಾಸರು ಒಬ್ಬ ಸಂತಕವಿಯಾಗಿ, ಶ್ರೇಷ್ಠ ದಾರ್ಶನಿಕರಾಗಿ ನಿಲ್ಲುತ್ತಾರೆ. ಕನಕದಾಸರ ಸೂಕ್ತಿಗಳಲ್ಲಿ ಎದ್ದು ಕಾಣುವ ವಿಶೇಷವೆಂದರೆ, ಸರಳತೆ ಮತ್ತು