ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ೩೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೩೯ ಇರುವುದರ ಜೊತೆಗೆ, ತಮ್ಮ ಸ್ವಂತ ಅನುಭವದ ಕೆಲವು ಸಾಮಾಜಿಕ ನಿಲವು, ನೋಟಗಳತ್ತ ತಮ್ಮ ದೃಷ್ಟಿಯನ್ನು ಹರಿಸಿ ಅವರು ವಿಶಿಷ್ಟರಾಗಿದ್ದಾರೆ. ಉದಾಹರಣೆಗೆ-ಕುಲವನ್ನು ಕುರಿತ ಕನಕದಾಸರ ನಿಲುವನ್ನು ಗಮನಿಸಬಹುದು. ಎರಡು ಕೀರ್ತನೆಗಳಲ್ಲಿ ಹರಡಿದ ಅವರ ವಿಚಾರಧಾರೆ ಕುಲದ ಮೀಮಾಂಸೆಗೆ ಅವರು ಸಲ್ಲಿಸಿದ ವಿಶಿಷ್ಟ ಕಾಣಿಕೆಯಾಗಿದೆ. “ಕೆಸರಲ್ಲಿ ಹುಟ್ಟಿದ ತಾವರೆ ವಿಷ್ಣುವಿಗೆ ಅರ್ಪಿತವಾಗಲಿಲ್ಲವೆ? ಹಸುವಿನ ಮಾಂಸದಲ್ಲಿ ಹುಟ್ಟಿದ ಹಾಲು ಉಣ್ಣಲು ಯೋಗ್ಯವಲ್ಲವೆ? ಮೃಗದ ಮೈಯಲ್ಲಿ ಹುಟ್ಟಿದ ಕಸ್ತೂರಿ ಪೂಸಿಕೊಳ್ಳಲು ಯೋಗ್ಯವಲ್ಲವೆ? ಎಂದೆಲ್ಲ ಪ್ರಶ್ನಿಸಿ ನಾರಾಯಣ, ಅಗಜವಲ್ಲಭರು ಯಾವ ಕುಲದವರೆಂದು ಕೇಳುತ್ತಾರೆ. ಹೀಗೆ ಬೆಳೆಯುತ್ತಾ ಹೋಗಿ ಆತ್ಮ ಯಾವ ಕುಲ, ಜೀವ ಯಾವ ಕುಲ, ತತೇಂದ್ರಿಯಗಳು ಕುಲ ಯಾವುದು? ಆದಿಕೇಶವನೊಲಿದ ಮೇಲೆ ಯಾತರ ಕುಲವಯ್ಯ ಎನ್ನುತ್ತಾರೆ. ಕುಲವನ್ನು ಕುರಿತು ಮೇಲುಜಾತಿಯವರಾದ ಕವಿಗಳು ಸಹಾನುಭೂತಿಪರವಾದ ನಿಲವನ್ನು ತಳೆದಿರುವುದಕ್ಕೂ, ಸಾಮಾಜಿಕವಾಗಿ ಕೀಳೆನಿಸಿಕೊಂಡ ಕುಲದಲ್ಲಿ ಹುಟ್ಟಿದವರು ಅದರ ಬೇನೆಯನ್ನು ಅರಿತವರು ಅದನ್ನು ಕುರಿತು ಪ್ರಶ್ನಿಸುವುದಕ್ಕೂ ಅಂತರವಿದೆ. ಪಂಪನಲ್ಲಿ ಕರ್ಣ ತಾನು ಸೂತಪುತ್ರನೆಂದು ತಿಳಿದಿದ್ದಾಗ ತನ್ನನ್ನು ಕೆಣಕಿದ ದ್ರೋಣರಿಗೆ ಕೊಡುವ ಉತ್ತರದಲ್ಲಿರುವ ಆವೇಶ ಮತ್ತು ಸಹಜತೆ ಬೇರೆಡೆ ದೊರೆಯುವುದಿಲ್ಲ. “ಕುಲಮಿರ್ದುದೆ ಶರಸ್ತಂಭದೊಳಂ ಕುಲಂಕುಲಮಲ್ಲು ಚಲಂ ಕುಲಂ, ಅಣ್ಮುಕುಲಂ ಅಭಿಮಾನಂ ಕುಲಂ” ಇಂಥ ಮಾತುಗಳು ಕ್ಷಾತ್ರಯುಗಕ್ಕೆ ಹೇಳಿ ಮಾಡಿಸಿದಂಥವು. 'ಸರ ಸಿಜಮನುವಿದ್ದಂ ಶೈವಲೇನಾಪಿರಮ್ಯಂ' ಎಂದು ಕಾಳಿದಾಸ ಕ್ಷತ್ರಿಯ ಸಂಭವೆ ಶಕುಂತಲೆಯನ್ನೇ ಸಮರ್ಥಿಸಿಕೊಳ್ಳಬೇಕಾಯಿತು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಪ್ರೋತ್ಸಾಹದಿಂದ ಧೈರ್ಯ ಪಡೆದ ವಚನಕಾರರು, ಶಿವಶರಣರು ಕುಲವನ್ನು ಕುರಿತ ತಮ್ಮ ದಿಟ್ಟನಿಲವನ್ನು ಪ್ರತಿಪಾದಿಸಿದರು. 'ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಮಜ್ಜನಕ್ಕೆ, ಕುಲವೊಂದೇ ತನ್ನತಾನರಿದವಂಗೆ' ಎಂದ ಬಸವಣ್ಣ, “ಮನುಷ್ಯ ಜಾತಿ ತಾನೊಂದೆವಲಂ' ಎಂದ ಪಂಪ, ನಡುವೆ ಸುಳಿವ ಆತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ' ಎಂದಳು ಮಹಾದೇವಿಯಕ್ಕ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಕನಕದಾಸರ ಈ ಕೀರ್ತನೆಗಳನ್ನು ಗಮನಿಸಿದಾಗ ಅವರ ವೈಶಿಷ್ಟ್ಯ ಗಮನಕ್ಕೆ ಬರುತ್ತದೆ. ಶಿವ, ವಿಷ್ಣುವಿನ ಕುಲವನ್ನೇ ಪ್ರಶ್ನಿಸುವಷ್ಟು ತಾಕತ್ತು ಅವರಲ್ಲಿದೆ. ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ' ಎಂದು ದೇವರ ದಾಸಿಮಯ್ಯ ಸವಾಲೆಸೆದಂತೆ ಕನಕದಾಸರು ತಮ್ಮ ಇಷ್ಟದೈವವನ್ನೂ ಕುಲದ ಒರೆಗಲ್ಲಿಗೆ ತಿಕ್ಕಿ ನೋಡಿದ್ದಾರೆ. ಹಾಗೆ ಆ ದೈವವನ್ನು ಎಲ್ಲರೂ ಒಪ್ಪಿಕೊಂಡಿರುವಾಗ ಅವನ ಭಕ್ತರಾದ ಮಾನವಕುಲಕ್ಕೆ ಈ ಕುಲದ ಕಳಂಕವನ್ನು ಅಂಟಿಸುವುದು ಸರಿಯೇ ಎಂಬುದು ಅವರ ಪ್ರಶ್ನೆ. ಜೀವಾತ್ಯ, ಪರಮಾತ್ಮಗಳ ಕುಲವನ್ನು ಯಾರೂ ಪ್ರಶ್ನಿಸುವುದಿಲ್ಲವೆಂದ ಮೇಲೆ ಈ ದೇಹಕ್ಕೆ ಯಾಕೆ ಈ ಬವಣೆ ಎನ್ನುವ ಪ್ರಶ್ನೆ ಅವರದು. ಕುಲದ ಹೆಸರಿನಲ್ಲಿ ಹೊಡೆದಾಡುವ ಅಲ್ಪಮತಿಗಳಿಗೆ, ಅವರ ವಿವೇಕದ ಉಪದೇಶ ಇದ್ದೇ ಇದೆ. 'ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ, ಜಲವೆ ಸಕಲ ಕುಲಕ್ಕೆ ತಾಯಲ್ಲವೆ' (ಡಾರ್ವಿನ್ನನ ವಿಕಾಸವಾದ ಅರಿವಿರುವಂತೆ ಕಾಣುತ್ತದೆಯಲ್ಲ ಕನಕದಾಸರಿಗೆ !) ಇತ್ಯಾದಿ ತಾರ್ಕಿಕ ನಿಲವನ್ನು ಪ್ರತಿಪಾದಿಸಿದ ಕನಕದಾಸರಿಗೆ ಪರಂಪರೆಯ ಅರಿವು ಇದ್ದೇ ಇದೆ ಎನಿಸುತ್ತದೆ. ಅಲ್ಲಲ್ಲಿ ಒಂದೊಂದು ದಿಟ್ಟದನಿ ಈ ಕುಲದ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಪ್ರಶ್ನಿಸುತ್ತಲೇ ಬಂದಿದೆ. ಇಂಥ ದನಿಗಳಲ್ಲಿ ಕನಕದಾಸರ ದನಿಗೆ ವಿಶೇಷ ಮಹತ್ವವಿರುವುದು ಅವರ ಪರಿಸರದ ಹಿನ್ನೆಲೆಯಿಂದಾಗಿ, ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ' ಎಂಬ ಅವರ ಕೀರ್ತನೆಯಲ್ಲಿ ಸೃಷ್ಟಿಯ ರಹಸ್ಯವನ್ನು ಭೇದಿಸುವ ಪ್ರಯತ್ನವನ್ನು ಕಾಣುತ್ತೇವಾದರೂ ಬೀಜವೃಕ್ಷ ನ್ಯಾಯವನ್ನು ಪರಿಹರಿಸಲಾಗದೆ ಕೊನೆಗೆ ಶರಣಾಗತಿಯಲ್ಲಿ ಪರ್ಯವಸಾನವಾಗುತ್ತದೆ. ಬಯಲು - ಆಲಯ - ಇವೆರಡನ್ನೂ ಪರಿಭಾವಿಸುವ ನಯನ, ನಯನ - ಬುದ್ದಿ - ಇವೆರಡನ್ನೂ ಆವರಿಸುವ ಹರಿ, ಸವಿ-ಸಕ್ಕರೆ-ಜಿ., ಮನಸ್ಸು-ಈ ಎಲ್ಲ ಅನುಭವಗಳಿಗೆ ಕಾರಣವಾದ ಹರಿಚಿತ್ರ ಕುಸುಮ-ಗಂಧ-ಮೂಗು-ಈ ಇಂದ್ರಿಯಾನುಭವವನ್ನು ಅತೀಂದ್ರಿಯಗೊಳಿಸುವ ಕೇಶವ-ಹೀಗೆ 'ಅವರ ಕೀರ್ತನೆಯಲ್ಲಿ ಹೆಜ್ಜೆ ಹೆಜ್ಜೆಗೂ ವಿಸ್ತರಿಸುತ್ತಾ ಹೋಗುವ ಆಶ್ಚರ್ಯ ಮೂಲವಾದ ಜಿಜ್ಞಾಸೆ ತನ್ನ ವಿಚಾರದ ವಿಲಾಸದಿಂದ ತಾತ್ವಿಕ ಜಿಜ್ಞಾಸೆಯಲ್ಲದೆ ಸೌಂದರ್ಯದ ಜಿಜ್ಞಾಸೆಯೂ ಆಗಿ ಕಡೆಗೆ ಈ ಲೋಕದ ಮೂಲಭೂತ ವಿಸ್ಮಯದ ಹೊಳಹಿನಲ್ಲಿ ನಿಲುಗಡೆಯನ್ನೂ ಕಂಡುಕೊಳ್ಳುವ ರೀತಿ ಅಪೂರ್ವವಾಗಿದೆ. 'ಜ್ಞಾನಂ ವಿಜ್ಞಾನ ಸಹಿತಂ' ಎಂಬ ತಿಳಿವಳಿಕೆಯ ಭಗವದ್ಗೀತೆಯ ಶ್ಲೋಕವೊಂದು ಇಂಥ ಆಲೋಚನೆಗೆ ಪ್ರೇರಣೆ ನೀಡಿದ್ದಿರಬಹುದು.