ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ೬೭೧ ಆ ಕಾಲದ ಸಾಹಿತ್ಯವನ್ನು ಎತ್ತಿಕೊಂಡು ಹಾಡಬೇಕೆನ್ನುವವರು ಅದಕ್ಕೆ ಸಹಜವಾದ ಸಂಗೀತವನ್ನೂ ಮನದಟ್ಟು ಮಾಡಿಕೊಳ್ಳಬೇಕು. ಆ ಸಂಗೀತದ ಸ್ವರೂಪ, ಸ್ವಭಾವ, ಪ್ರಯೋಜನ ಮುಂತಾದುವನ್ನು ಗಣನೆಗೆ ತಂದುಕೊಳ್ಳದೆ, ಮನಸ್ಸಿಗೆ ಬಂದಂತೆ ಆ ಸಾಹಿತ್ಯಕ್ಕೆ ರಾಗನಿರ್ದೇಶನ, ಸ್ವರ ಸಂಯೋಜನೆಗಳನ್ನು ಮಾಡಿ ಜನರೆದುರು ಒರೆಯುವುದು ಸರಿಯೆ ? ಇದನ್ನು ವಿವೇಚನೆ ಮಾಡಬೇಕೆಂದು ನನ್ನ ಬಿನ್ನಹ. ಅದರ ಅಗತ್ಯವನ್ನು ಒತ್ತಿ ಹೇಳಿ, ಅಲ್ಲಿರುವ ಸಮಸ್ಯೆಗಳನ್ನು ನನಗೆ ತಿಳಿದಮಟ್ಟಿಗೆ ಸ್ಪಷ್ಟಪಡಿಸಲೆಂದೇ ಈ ಬರಹ.. ಕನಕದಾಸರಿದ್ದ ಕಾಲ ಯಾವುದು ? ಖಚಿತವಾಗಿ, ಕುರಿತೇಟಿನಂತೆ ಹೇಳಲಾಗದಿದ್ದರೂ, ಅವರು ವ್ಯಾಸತೀರ್ಥರ ಶಿಷ್ಯರು, ಪುರಂದರದಾಸರ ಸಮಕಾಲಿಕರು, ವಿಜಯನಗರ ಸಾಮ್ರಾಜ್ಯದ್ದು ಮೇಲುಗೈ ಆಗಿದ್ದಾಗ ಇದ್ದವರು ಎಂಬ ಸಂಗತಿಗಳನ್ನು ಗಮನಿಸಿದಾಗ, ೧೪೬೭ ಮತ್ತು ೧೫೬೫ ರ ನಡುವೆ ಬದುಕಿ ಬಾಳಿದವರು ಎಂದು ಹೇಳಲು ಅಡ್ಡಿಯಲ್ಲ. ಅವರಿದ್ದ ಪ್ರಾಂತ ಯಾವುದು? ಕನ್ನಡನಾಡೆಂಬುದು ನಿಶ್ಚಯವೇ. ಆಗ ಈ ನಾಡಿನಲ್ಲಿ ವಾಡಿಕೆಯಲ್ಲಿದ್ದ ಸಂಗೀತ ಯಾವುದು ? ಈಗ ಇಲ್ಲಿ ವಾಡಿಕೆಯಲ್ಲಿರುವ ಸಂಗೀತವಂತೂ ಅಲ್ಲ ! ಏಕೆಂದರೆ, ಈಗ ವಾಡಿಕೆಯಲ್ಲಿರುವ ಸಂಗೀತ ತ್ಯಾಗರಾಜರ ಕಾಲದಿಂದ, ಎಂದರೆ ೧೭೬೭-೧೮೪೭ ರಿಂದ, ಈಚೆಗೆ ಬೆಳೆದುಬಂದದ್ದು ತಾನೆ ? ನಡುವೆ ಇನ್ನೂರು ವರ್ಷಗಳಷ್ಟು ಅಂತರವಿದೆ. ಈ ಅಂತರದಲ್ಲಿ ಶಾಸ್ತ್ರೀಯ ಸಂಗೀತ ಒಂದು ನಿಶ್ಚಿತವಾದ ಘಟ್ಟವನ್ನು ಮುಟ್ಟಿತು ಎಂಬುದು ತಿಳಿದುಬಂದಿದೆ. ಮುಖ್ಯವಾಗಿ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಇರದಿದ್ದ ರಾಗಗಳನ್ನೆಲ್ಲ ಒಂದು ಚೌಕಟ್ಟಿನಲ್ಲಿ ಕೂಡಿಸಿ, ಜನಕ ಮತ್ತು ಜನ್ಯರಾಗ ಗಳೆಂದು ವಿಭಾಗ ಮಾಡಿ, ವೇಂಕಟಮುನಿ ಮೇಳಕರ್ತ ಪದ್ಧತಿಯನ್ನು ಸಿದ್ದಪಡಿಸಿದನು. ಇದು ನಡೆದದ್ದು ೧೬೭೦ರ ಸುಮಾರಿಗೆ. ಇದನ್ನು ನೋಡುವಾಗ, ಜನಕರಾಗಗಳೇ ಮೊದಲಿಂದ ಇದ್ದವು, ಅವುಗಳಿಂದ ಆನಂತರ ಹುಟ್ಟಿಕೊಂಡವು ಜನ್ಯರಾಗಗಳು ಎಂದು ಭಾವಿಸುವ ಸಂಭವವಿದೆ. ಆದರೆ ವಸ್ತುಸ್ಥಿತಿ ಹಾಗಲ್ಲ. ಈಗ ಜನ್ಯರಾಗಗಳೆನಿಸಿಕೊಳ್ಳುವ ಹಲವಾರು ರಾಗಗಳೇ ಈಗಿನ ಜನಕರಾಗಗಳಿಗೆ ಕಾರಣವಾದುವು. ನಿದರ್ಶನಕ್ಕೆ ನಾಟ್ಟ ತುಂಬ ಹಳೆಯ ರಾಗ : ಅದರಿಂದಲೇ ಚಲನಾಟವೆಂಬ ಮೇಳ ಸಿದ್ಧವಾಯಿತು : ಈಗ ನಾಟ್ಟವನ್ನು ಚಲನಾಟಜನ್ಯ ಎಂದೇ ಹೇಳುತ್ತಾರೆ ! ಈ ಮೇಳಪದ್ಧತಿ ಮೈದಳೆಯುವ ಮೊದಲು ಮೇಳಗಳಿರಲಿಲ್ಲವೆಂದಲ್ಲ. ಹತ್ತೊಂಬತ್ತು ಮೇಳಗಳು ಮೊದಲೇ ಇದ್ದದ್ದು ವೇಂಕಟಮುನಿಯ ಒಕ್ಕಣೆಯಿಂದಲೇ ತಿಳಿದು ಬರುತ್ತದೆ. ಇವನ್ನು ಕಲ್ಪಿತ' ಎಂದು ವೇಂಕಟಮುನಿ ಕರೆಯುತ್ತಾನೆ. ಎಂದರೆ ಮೊದಲಿದ್ದ ರಾಗಗಳನ್ನು ಪರಿಷ್ಕರಿಸಿ ಶಾಸ್ತ್ರೀಯವಾದ ರೂಪವನ್ನು ಕೊಟ್ಟದ್ದು ಎಂದರ್ಥ. ಅವುಗಳೊಂದಿಗೆ “ಕಲ್ಪಮಾನ' (ಎಂದರೆ ಹೊಸದಾಗಿ ಮಾಡಿದವು) ಮತ್ತು 'ಕ್ಲಪಿಷ್ಯಮಾಣ' (ಮುಂದೆ ಮಾಡಲು ನೆರವಾಗುವುವು) ಎಂಬ ಐವತ್ತುಮೂರು ರಾಗಗಳನ್ನು ಸೇರಿಸಿ ಒಟ್ಟು ಎಪ್ಪತ್ತೆರಡು ಮೇಳಗಳ ಪಟ್ಟಿ ಮೈದಳೆಯಿತು. ಇಲ್ಲಿ ಕಲ್ಪಿತ ಎಂಬ ಮಾತನ್ನು ನೋಡಿ, ಶಾಸ್ತ್ರಜ್ಞರು ತಮ್ಮ ಲೆಕ್ಕಾಚಾರಕ್ಕೆ ಸಿದ್ಧಪಡಿಸಿಕೊಂಡದ್ದು ಎಂದು ಆ ಮಾತಿನ ಅರ್ಥ. ಆಗಲೇ ಇದ್ದ ರಾಗಗಳು ಎಂದರ್ಥವಲ್ಲ. ಆದರೆ ರಾಗಗಳು ಆಗ ಇಲ್ಲವೆಂದಲ್ಲ. ರಾಗಗಳು ತುಂಬ ಹಿಂದಿನಿಂದಲೇ ಇವೆ. ವೇಂಕಟಮುನಿಯ ತಂದೆ ಗೋವಿಂದ ದೀಕ್ಷಿತರು ತಮ್ಮ 'ಸಂಗೀತಸುಧೆ' ಯಲ್ಲಿ ವಿದ್ಯಾರಣ್ಯರ ಕೊಡುಗೆಯನ್ನು ವಿವರಿಸುತ್ತ, 'ಪ್ರಚುರ ಪ್ರಯೋಗ'ವಿದ್ದ ಹಲವು ರಾಗಗಳನ್ನು ಹಿಡಿದು ಐವತ್ತು ಪರಿಷ್ಕತ ರಾಗಗಳನ್ನು ಸಿದ್ದಪಡಿಸಿದರು ಎಂದು ಹೇಳಿದ್ದಾರೆ. ಇದು ೧೬೧೪ರ ಮಾತು. ಅವರ ಒಕ್ಕಣೆ 'ಆರಭ್ಯ ರಾಗಗಾನ್ ಪ್ರಚುರ ಪ್ರಯೋಗಾನ್' ಎಂದು ಮೊದಲಾಗುತ್ತದೆ. “ಪ್ರಚುರಪ್ರಯೋಗ'ವೆಂದರೆ ಜನರ ನಡುವೆ ಬಳಕೆಯಲ್ಲಿದ್ದ ರಾಗಗಳು. ವೇಂಕಟಮುನಿಯ 'ಕಲ್ಪಿತ'ರಾಗಗಳು ಶಾಸ್ತ್ರಜ್ಞರ ಸೊತ್ತು, ಗ್ರಂಥ ಸಮರ್ಥನೆ ಅವಕ್ಕಿವೆ. ವಿದ್ಯಾರಣ್ಯರು ಅವಲಂಬಿಸಿದ (ಆರಭ್ಯ' ಎನ್ನುವ ಮಾತಿಗೆ 'ಆಲಂಖ್ಯೆ ಎಂದರ್ಥ) ರಾಗಗಳಾದರೋ ಜನರ ಪರಿಚಯದಲ್ಲಿ, ವ್ಯವಹಾರದಲ್ಲಿ ಇದ್ದವು. ವಿದ್ಯಾರಣ್ಯರೂ ಹದಿನೇಳು ಮೇಳಗಳನ್ನು ಪಟ್ಟಿಮಾಡಿದ್ದರಂತೆ. ಆದರೆ ಅವು ಬೇರೆ ಪ್ರಚುರ ಪ್ರಯೋಗದ ರಾಗಗಳು ಬೇರೆ. ಇವೆಲ್ಲ ಪುರಂದರದಾಸರ, ಕನಕದಾಸರ ಕಾಲ ಮುಗಿದ ಮೇಲೆ ನಡೆದ ಸಂಗತಿಗಳು ಪುರಂದರದಾಸರ ಇಳಿವಯಸ್ಸಿನಲ್ಲಿ, ಬಹುಶಃ ಕನಕದಾಸರು ತೀರಿಕೊಂಡಮೇಲೆ ಬಯಕಾರ ರಾಮಯಾಮಾತ್ಯನ 'ಸ್ವರಮೇಳಕಳಾನಿಧಿ' ಹೊರಬಂದಿತು ; ೧೫೫೦ರಲ್ಲಿ, ಅದರಲ್ಲಿ ಆ ಕಾಲಕ್ಕೆ ಶಾಸ್ತ್ರಜ್ಞರು ಗೊತ್ತು ಪಡಿಸಿದ ರಾಗಲಕ್ಷಣಕ್ಕೂ, ಜನರ ನಡುವೆ ಬಳಕೆಯಲ್ಲಿದ್ದ ರಾಗ ನಿರೂಪಣೆಗೂ ವಿರೋಧವಿದ್ದಿತೆಂಬ ಮಾತು ಬರುತ್ತದೆ.