ಈ ಪುಟವನ್ನು ಪ್ರಕಟಿಸಲಾಗಿದೆ
೮೮
ಕನ್ನಡಿಗರ ಕರ್ಮಕಥೆ

ಇರಲಿಕ್ಕೆ ಕೊಡಬೇಕು,” ಎಂದು ಹೇಳಿದನು. ಅದಕ್ಕೂ ತಿರುಮಲನು ಒಪ್ಪಿಕೊಂಡನು ಆತನಿಗೆ ಬಾದಶಹನು ಬೇಗನೆ ರಾಜಧಾನಿಯನ್ನು ಬಿಟ್ಟು ಹೋದರೆ ಸಾಕಾಗಿತ್ತು. ಈ ಮೇರೆಗೆ ತನ್ನ ಮನೋದಯಗಳೆಲ್ಲ ಪೂರ್ಣವಾದಂತೆಯಾದ್ದರಿಂದ ಬಾದಶಹನು ತಾನು ಇಂದೇ ತುಂಗಭದ್ರೆಯನ್ನು ದಾಟಿ ಹೋಗಿ ತಿರುಮಲನ ಕಪಟದ ಕೃತ್ಯಗಳಿಗಾಗಿ ಅವನ ಪ್ರಾಯಶ್ಚಿತ್ತ ಮಾಡಬೇಕೆಂದು ಯೋಚಿಸಿ ವಿಜಯನಗರವನ್ನು ಬಿಟ್ಟುಹೋದನು.

ಬಾದಶಹನು ರಾಜಧಾನಿಯನ್ನು ಬಿಟ್ಟು ಹೋದದ್ದರಿಂದ ತಿರುಮಲನಿಗೂ, ರಾಮರಾಜನಿಗೂ ಕೂಡಿಯೇ ಸಂತೋಷವಾಯಿತು. ಬಾದಶಹನು ಹೋದದ್ದರಿಂದ ರಾಮರಾಜನಿಗೆ ತನ್ನ ಒಳಸಂಚಿನ ಕಾರ್ಯವನ್ನು ನಡಿಸಲಿಕ್ಕೆ ಒಂದು ದಿವಸ ಅವಕಾಶವು ಸಹ ಬೇಕಾಗಿದ್ದಿಲ್ಲ. ಅದರಂತೆ ಆತನ ಸಿದ್ಧತೆಯೂ ಆಗಿತ್ತು. ಯಾವತ್ತೂ ಸೈನಿಕರನ್ನು, ಒಡಕೊಂಡಿದ್ದರಿಂದ ರಾಮರಾಜನು ಅಕಸ್ಮಾತ್ತಾಗಿ ತಿರುಮಲನ ಮನೆಯನ್ನು ಮುತ್ತಿದನು. ಮೊದಲೇ ಅಂಜುಬುರುಕನಾದ ತಿರುಮಲನಿಗೆ ಈ ಆಕಸ್ಮಿಕ ಪ್ರಸಂಗದಿಂದ ಹುಚ್ಚೇ ಹಿಡಿಯಿತೆಂದು ಹೇಳಬಹುದು. ರಾಮರಾಜನು ತಿರುಮಲನನ್ನು ಸೆರೆಹಿಡಿಯಬೇಕೆಂದು ಮಾತ್ರ ಮಾಡಿದ್ದನು. ಆದರೆ ತಿರುಮಲನು ಇನ್ನು ಮೇಲೆ ತನ್ನ ಜೀವವು ಉಳಿಯದೆಂದು ನಿಶ್ಚಯಿಸಿದನು ತನ್ನ ಮಿತ್ರನಾದ ಆದಿಲಶಹನಿಗೆ ಸುದ್ದಿಯನ್ನು ಕಳಿಸಲಿಕ್ಕೂ ಆತನಿಗೆ ಮಾರ್ಗವಿಲ್ಲದೆ ಹೋಯಿತು. ತಾನು ಬಾದಶಹನನ್ನು ಕರೆಸಿ ಮಿತಿಮೀರಿ ಕಪ್ಪ ಕೊಟ್ಟದ್ದೂ, ಆತನ ಮಾಂಡಲಿಕತ್ವವನ್ನು ಒಪ್ಪಿಕೊಂಡದ್ದೂ ಅಪರಾಧವಾಯಿತೆಂದು ಆತನು ಈಗ ಪಶ್ಚಾತ್ತಾಪ ಪಡಹತ್ತಿದನು. ಇನ್ನು ಮೇಲೆ ತಾನು ಎಷ್ಟು ಪಶ್ಚಾತ್ತಾಪಪಟ್ಟು, ಎಷ್ಟು ಬೇಡಿಕೊಂಡರೂ ಜನರು ತನ್ನನ್ನು ದೇಶದ್ರೋಹಿ ಎಂದು ತಿರಸ್ಕರಿಸಿ ತನ್ನ ಪ್ರಾಣಹರಣ ಮಾಡುವರಲ್ಲದೆ, ತನ್ನನ್ನು ಕ್ಷಮಿಸರೆಂದು ಆತನು ತಿಳಿದುಕೊಂಡನು. ಈ ವಿಚಾರಗಳಿಂದ ಆತನಿಗೆ ಹುಚ್ಚೇ ಹಿಡಿದಂತಾಯಿತು. ಆತನು ಅರಮನೆಯ ಗಜಶಾಲೆಯೊಳಗಿನ ಆನೆಗಳನ್ನೆಲ್ಲ ತರಿಸಿ ಅವುಗಳ ಬಾಲವನ್ನು ಕತ್ತಿರಿಸಿ, ಕಣ್ಣುಗಳನ್ನು ಕಳೆದು ತನ್ನ ವೈರಿಗಳ ನಾಶಮಾಡುವದಕ್ಕಾಗಿ ಅವನ್ನು ಹೊರಗೆ ಬಿಟ್ಟನು. ತಾನು ಈಗ ಎರಡು ವರ್ಷಗಳಿಂದ ತನ್ನ ಮನೆಯಲ್ಲಿ ತುಂಬಿಕೊಂಡಿದ್ದ ಬಹು ಬೆಲೆಯುಳ್ಳ ಮುತ್ತು ರತ್ನಗಳ ಆಭರಣಗಳನ್ನು ತರಿಸಿ, ಅವುಗಳೊಳಗಿನ ಮುತ್ತು ರತ್ನಗಳನ್ನು ಒಡೆದು ಚೂರು ಚೂರು ಮಾಡಿದನು. ಈ ಶ್ರೇಷ್ಠವಾದ ಅಲಂಕಾರಗಳನ್ನು ವಿಜಯನಗರದ ಪರಾಕ್ರಮಶಾಲಿಗಳಾದ ಎಷ್ಟೋ ಅರಸರು ಹಲವು ರಾಜ್ಯಗಳನ್ನು ಮಣ್ಣುಗೂಡಿಸಿ ಸಂಪಾದಿಸಿದ್ದರು.