ಈ ಪುಟವನ್ನು ಪ್ರಕಟಿಸಲಾಗಿದೆ
ಜಾಜ್ವಲ್ಯವೃತ್ತಿಯು
೧೦೫

ತನ್ನ ಸ್ಥಳಕ್ಕೆ ಬಂದನು. ಈಗ ಆತನು ಬಹಳ ರೊಚ್ಚಿಗೆದ್ದಿದ್ದನು. ತನ್ನ ಪ್ರತಿಜ್ಞೆಯನ್ನು ಯಾವಾಗ ಪೂರ್ಣ ಮಾಡೇನೆಂಬ ಆತುರವು ಅವನಿಗೆ ವಿಶೇಷವಾಗಿತ್ತು. ಆತನು ರಾಮರಾಜನ ತನಕ ತಾನೇ ತಟ್ಟನೆ ಹೋಗಿ, ನಡೆದ ಸಂಗತಿಯನ್ನು ಆತನಿಗೆ ಹೇಳಿ, ಬೇಗನೆ ಕೆಲಸ ಮಾಡಿಕೊಳ್ಳಬೇಕೆಂದು ಮಾಡಿದನು; ಆದರೆ ತಾನು ಪತ್ರವನ್ನು ಬರೆದು ಕಳಿಸಿದರೆ ಕೆಲಸವಾದೀತೆಂದು ತಿಳಿದು, ತಾನು ಹೋಗುವದನ್ನು ಉದಾಸೀನ ಮಾಡಿದನು. ಹರೆಯದ ಮಬ್ಬು, ರಾಮರಾಜನು ನನ್ನ ಮಾತು ಯಾಕೆ ಕೇಳುವದಿಲ್ಲೆಂಬ ಸೊಕ್ಕು, ನಾನು ವಿಜಾಪುರದ ಬಾದಶಹನ ವಕೀಲನೆಂಬ ಡೌಲು, ಇವೆಲ್ಲವುಗಳ ಯೋಗದಿಂದ ತನ್ನ ಮಾತನ್ನು ರಾಮರಾಜನು ನಡಿಸಿಯೇ ತೀರುವನೆಂದು ತಿಳಿದು, ರಣಮಸ್ತಖಾನನು ರಾಮರಾಜನಿಗೆ ಒಂದು ಪತ್ರವನ್ನು ಬರೆದು, ಒಬ್ಬ ಸೇವಕನ ಕೈಯಲ್ಲಿ ಕೊಟ್ಟು, ವಿಜಯನಗರಕ್ಕೆ ಕಳಿಸಿದನು. ಆ ಸೇವಕನು ಸ್ವಲ್ಪ ದೂರ ಹೋದನೋ ಇಲ್ಲವೋ ಮತ್ತೆ ಮತ್ತೆ ಆತನನ್ನು ಕರೆಸಿ- “ನಿನ್ನ ಕುದುರೆಯು ನೆಟ್ಟಗೆ ನಡಯಲಿಕ್ಕಿಲ್ಲ. ಅಶ್ವಶಾಲೆಯೊಳಗಿನ ಒಂದು ಚಲೋ ಕುದುರೆಯನ್ನು ತಕ್ಕೊಂದು ಹೋಗು” ಎಂದು ಹೇಳಿ ಆತನನ್ನು ಕಳಿಸಿದನು. ಆ ಸೇವಕನು ಅಶ್ವಶಾಲೆಯನ್ನು ಮುಟ್ಟುವದರೊಳಗೆ ರಣಮಸ್ತಖಾನನು ಮತ್ತೊಬ್ಬ ಸೇವಕನನ್ನು ಕರೆದು- “ನೋಡು, ಅವನಿಗೆ ಒಳ್ಳೆಯ ಕುದುರೆಯು ಸಿಕ್ಕಿತೋ ಇಲ್ಲವೊ' ಎಂದು ಹೇಳಿ ಕಳಿಸಿ, ಕೂಡಲೆ “ಈ ಕೆಲಸದಲ್ಲಿ ಮಂದಿಯ ಮೇಲೆ ನಂಬಿಗೆಯಿಡುವದು ಯೋಗ್ಯವಲ್ಲ” ಎಂದು ತಾನೇ ಅಶ್ವಶಾಲೆಗೆ ಹೋಗಿ, ಸೇವಕನು ಆರಿಸಿದ ಕುದುರೆಯು ತಕ್ಕದಲ್ಲವೆಂದು ಬಿಡಿಸಿ, ತನ್ನ ಪ್ರೀತಿಯ ಕುದುರೆಯನ್ನು ಆತನಿಗೆ ಕೊಡಿಸಿದನು. ಅಷ್ಟರಲ್ಲಿ ಆತನ ವಿಚಾರವು ಮತ್ತೆ ಬದಲಾಗಿ ಆತನು ಹೊರಟು ನಿಂತ ಸೇವಕನನ್ನು ಕುರಿತು-ನಿಲ್ಲು, ನೀನು ಹೋಗಿ ಪತ್ರದ ಉತ್ತರ ತರಬೇಕು, ಆಮೇಲೆ ನಾನು ಇಲ್ಲಿಂದ ಹೋಗಬೇಕು, ಇಷ್ಟು ವಿಳಂಬವನ್ನಾದರೂ ಯಾಕೆ ಮಾಡಬೇಕು ? ನಾನು ನಿನ್ನ ಸಂಗಡ ಬಂದು ಬಿಡುತ್ತೇನೆ. ನೀನು ರಾಮರಾಜನ ಬಳಿಗೆ ಹೋಗಿ ಪತ್ರದ ಉತ್ತರವನ್ನು ತರುವವರೆಗೆ, ನಾನು ವಿಜಯನಗರದ ಅಗಸೆಯ ಹೊರಗೆ ನಿಂತುಕೊಳ್ಳುವೆನು, ನೀನು ಬೇಗನೆ ಉತ್ತರವನ್ನು ತಕ್ಕೊಂಡು ಬಾ, ಎಂದು ಹೇಳಿ, ತನ್ನ ಕುದುರೆಗೆ ಜೀನು ಹಾಕಿಸಿ, ಅವಸರದಿಂದ ಪೋಷಾಕು ಹಾಕಿ ಕೊಂಡು, ಕುದುರೆಯನ್ನು ಹತ್ತಿ ವಿಜಯನಗರದ ಕಡೆಗೆ ಸಾಗಿದನು. ಅತ್ಯಂತ ಆತುರ ಸ್ವಭಾವದ ಆ ತರುಣನಿಗೆ ಎಷ್ಟು ಒತ್ತರದಿಂದ ನಡೆದರೂ ಹಾದಿಯು ಸವೆದಂತೆ ಆಗಲೊಲ್ಲದು. ಆತನಿಗೆ ತಾನು ಯಾವಾಗ ವಿಜಯನಗರಕ್ಕೆ ಹೋದೇನು, ಯಾವಾಗ ಕೆಲಸ