ತನ್ನ ಖಡ್ಗವನ್ನು ಒರೆಯಿಂದು ಹಿರಿದನು. ಇದರಿಂದ ರಾಮರಾಜನ ಶಾಂತ ಮುದ್ರೆಯು ಅಣುಮಾತ್ರವು ಕುಗ್ಗಲಿಲ್ಲ, ಆತನು ರಣಮಸ್ತಖಾನನಿಗೆ- “ನಿಮ್ಮ ಈ ದುರಾಗ್ರಹವನ್ನು ನೋಡಿ ನನ್ನ ಮನಸ್ಸಿನಲ್ಲಿ ಮತ್ತೊಂದು ಸಂಶಯವು ಉತ್ಪನ್ನವಾಗಿರುತ್ತದೆ. ನೀವು ಇವರನ್ನು ಇಷ್ಟು ಮೇಲುಗಟ್ಟಿ ಬರುವುದರಿಂದ, ನಿಮಗೆ ಇವರ ಸಂಬಂಧವೇನಾದರೂ ಇರಲಿಕ್ಕೆ ಬೇಕು. ಸರಿ ಸರಿ. ಈಗ ನನ್ನ ಲಕ್ಷ್ಯದಲ್ಲಿ ಬಂದಿತು; ಈ ಜನರು ನಿಮ್ಮ ಬಳಿಗೆ ಕಾಗದ ಪತ್ರಗಳನ್ನು ಕೊಡುವುದಕ್ಕಾಗಿಯೇ ಈ ಹಾದಿಯಿಂದ ಬಂದಿರಬಹುದು. ನೀವು ಏನೇನು ಒಳಸಂಚುಗಳನ್ನು ನಡಿಸಿರುವಿರೆಂಬದನ್ನು ಕೇಳಿಕೊಂಡು ಹೋಗುವ ಉದ್ದೇಶವು ಇವರದಿರಬಹುದು. ದರಗೆಯ ಹರಕೆ-ಗಿರಕೆಗಳೆಲ್ಲ ಸುಳ್ಳು; ಇಲ್ಲದಿದ್ದರೆ ನೀವು ಇಷ್ಟು ಮೇಲುಗಟ್ಟಿ ಬರುವ ಕಾರಣವೇನು ? ಈಗ ನಾನು ಕೈಮುಟ್ಟಿ ಪ್ರತಿಯೊಬ್ಬರ ಬುರುಕಿಯನ್ನು ತೆಗೆಯುತ್ತೇನೆ, ನೀವು ನನ್ನ ಜೀವಕ್ಕೆ ಅಪಾಯ ಮಾಡಲಿಕ್ಕೆ ಮುಂದುವರಿದರೆ............
ಆದರೆ ಆತನ ಮುಖದಿಂದ ಮುಂದಿನ ಮಾತುಗಳು ಹೊರಡಲಿಲ್ಲ. ಆತನು ಸ್ವಲ್ಪ ಹೊತ್ತು ಸುಮ್ಮನಿದ್ದು, ಬಹು ಕಷ್ಟದಿಂದ ಖಾನನನ್ನು ಕುರಿತು-"ನಿಮಗೆ ಸ್ವಲವೂ ಅಪಾಯವಾಗಬಾರದೆಂದು ನಾನು ಇಚ್ಚಿಸುತ್ತೇನೆ; ಇದರ ಮೇಲೆ ನಿಮ್ಮ ಇಚ್ಚೆಯು” ಅನ್ನಲು, ಆಗ ರಣಮಸ್ತಖಾನನು- “ನನ್ನ ಶರೀರ ಸಾವಿರಾರು ಚೂರುಗಳಾದರೂ ಚಿಂತೆಯಿಲ್ಲ; ಆದರೆ ನಾನು ಬದುಕಿರುವವರೆಗೆ ಈ ಸ್ತ್ರೀಯರ ಮೈಮೇಲಿನ ಬುರುಕಿಗಳನ್ನು ದೂರ ಮಾಡಲಿಕ್ಕಿಲ್ಲ” ಎಂದು ಉತ್ತರ ಕೊಟ್ಟನು. ಮಾತಾಡುವಾಗಿನ ಆತನು ಅವಿರ್ಭಾವವು ವಿಲಕ್ಷಣವಾದದ್ದಿತ್ತು. ಈತನು ನುಡಿದಂತೆ ನಡೆಯದೆ ಬಿಡನೆಂದು ಎಲ್ಲರ ನಂಬಿಗೆಯಾಯಿತು. ರಣಮಸ್ತಖಾನನು ಇಷ್ಟು ಮಾತಾಡುವದರೊಳಗಾಗಿ ಏನು ಚಮತ್ಕಾರವಾಯಿತೋ ತಿಳಿಯದು. ಆ ಸ್ತ್ರೀಯಳಲ್ಲಿ ಮುಜ್ಯಳಾದ ತರುಣೆಯು, ಒಮ್ಮೆಲೆ ತನ್ನ ಬುರಕಿಯನ್ನು ಕಳಚಿ ಚೆಲ್ಲಿ, ತನ್ನ ಟೊಂಕದ ಮೇಲೆ ಎರಡೂ ಕೈಯಿಟ್ಟುಕೊಂಡು ಮುಖವೆತ್ತಿ ನಿಂತಳು, ಆಗ ಆಕೆಯ ಮುಖದಿಂದ 'ಛೇ ಛೇ' ನನ್ನ ಸಲುವಾಗಿ ಇಂಥ ಶೂರ ಪುರುಷನ ಶರೀರದ ಸಾವಿರಾರು ತುಣುಕುಗಳಾಗುವದು ಸರಿಯಲ್ಲ. ಅರಸಾ ನೋಡು; ನಿನ್ನ ಸಂಶಯವಿದ್ದದ್ದನ್ನು ದೂರಮಾಡಿಕೊ. ಆದರೆ ನೀನು ಸೆರಗಿಗೆ ಗಂಟು ಹೊಡೆದುಕೊಳ್ಳು; ಇಂದಿನ ನಿನ್ನ ಈ ಕೃತಿಯ ಪರಿಣಾಮವು ಘೋರವಾಗುವದು ! ಬಹಳ ಘೋರವಾಗುವದು !!