ಈ ಪುಟವನ್ನು ಪ್ರಕಟಿಸಲಾಗಿದೆ
ಸಂಭಾಷಣ
೧೨೧

ಅಂಥವನ ನೆನಪು ಈಗ ಮಹಾರಾಜನಿಗೆ ಒಮ್ಮಿಂದೊಮ್ಮೆ ಯಾಕೆ ಆಗಿರಬಹುದು? ನೆನಪು ಆದರೂ ಆಗಲಿ, ಅವನೇ ಈಗ ಚಾಕರಿಯ ಮೇಲೆ ಇರುವನೋ ಅನ್ನುವಂತೆ ಮಹಾರಾಜರು ಈಗ ಯಾಕೆ ಮಾತಾಡಿರಬಹುದು? ಎಂಬ ಪ್ರಶ್ನೆಗಳು ಉತ್ಪನ್ನವಾಗಿ, ಆ ಸೇವಕನಿಗೆ ಆಶ್ಚರ್ಯವಾಯಿತು. ಆದರೆ ಹಾಗೆ ಆಶ್ಚರ್ಯಪಡುತ್ತ ನಿಂತುಕೊಳ್ಳಲಿಕ್ಕೆ ಅದು ಸಮಯವಾಗಿದ್ದಿಲ್ಲ. ಧನಮಲ್ಲನು ಈಗೆಲ್ಲಿ ಇದ್ದಾನೆ ? ಎಂದು ರಾಮರಾಜನನ್ನು ಕೇಳಲಿಕ್ಕೂ ಆತನಿಗೆ ಧೈರ್‍ಯವಾಗಲೊಲ್ಲದು. ಆತನು ಸುಮ್ಮನೆ ಅಲ್ಲಿಂದ ಹೊರಟು ಅಶ್ವಶಾಲೆಗೆ ಹೋದನು ತನ್ನ ಒಡೆಯನಿಗೆ ಏನೋ ಭ್ರಾಂತಿಯಾದಂತೆ ಆಗಿರುವದರಿಂದ, ಈ ಸ್ಥಿತಿಯಲ್ಲಿ ಆತನನ್ನು ಒಬ್ಬನನ್ನೇ ಹೋಗಗೊಡುವದು ಯೋಗ್ಯವಲ್ಲೆಂದೆ ಆತನು ಆಲೋಚಿಸುತ್ತ, ಕುದುರೆಗೆ ಜೀನು ಹಾಕಿ ತಂದು ನಿಲ್ಲಿಸಿದನು. ಪ್ರಸಂಗಬಂದರೆ ತಾನೂ ಸಂಗಡ ಹೋಗಬೇಕೆಂದು ತಿಳಿದು, ಆತನು ತನ್ನ ಕುದುರೆಯನ್ನೂ ಜೀನುಹಾಕಿಸಿ ಮತ್ತೊಬ್ಬ ಸೇವಕನಿಂದ ತರಿಸಿ ನಿಲ್ಲಿಸಿದ್ದನು. ಅಷ್ಟರಲ್ಲಿ ರಾಮರಾಜನು ಪೋಷಾಕು ಹಾಕಿಕೊಂಡು, ಸೇವಕನು ತನ್ನ ಕುದುರೆಯನ್ನು ಚಟ್ಟನೆ ಹತ್ತಿದನು. ಆಗ ಸೇವಕನು-ನಾನು ಸಂಗಡ ಬರಲಷ್ಟೆ ? ಎಂದು ಕೇಳಲು, ರಾಮರಾಜನು ಬರಿಯ ತಲೆಯಲ್ಲಾಡಿಸಿ ಬರಬಹುದೆಂದು ಸೂಚಿಸಿದನು. ಕೂಡಲೇ ಆ ಸೇವಕನು ಸಿದ್ಧವಾಗಿ ನಿಂತಿದ್ದ ತನ್ನ ಕುದುರೆಯನ್ನು ಹತ್ತಿ, ಒಡೆಯನನ್ನು ಹಿಂಬಾಲಿಸಿ ಭರದಿಂದ ಸಾಗಿದನು. ಉಳಿದ ಸೇವಕರು-ಇಷ್ಟು ರಾತ್ರಿಯಲ್ಲಿ ಮಹಾರಾಜರು ಎಲ್ಲಿ ಹೋಗುತ್ತಿರಬಹುದು, ಎಂದು ತಮ್ಮ ತಮ್ಮೊಳಗೆ ಪ್ರಶ್ನೆಮಾಡುತ್ತಿದ್ದರು, ಆದರೆ ಯಾರಿಗಾದರೂ ಗೊತ್ತಿದ್ದರಷ್ಟೇ ಅವರ ಪ್ರಶ್ನಕ್ಕೆ ಉತ್ತರವನ್ನು ಹೇಳುವರು.

ಈ ಮೇರೆಗೆ ಸ್ವಚ್ಛಂಧವಾಗಿ ಹೊರಟಿದ್ದ ರಾಮರಾಜನು ಕುದುರೆಯನ್ನು ಭರದಿಂದ ಸಾಗಿಸಿಕೊಂಡು ಹೋಗಿ ತಾಸು ಹೊತ್ತು ಏರಿರುವಾಗ ಕುಂಜವನವನ್ನು ಮುಟ್ಟಿದನು ಆಗ ಕುಂಜವನವು ರಣಮಸ್ತಖಾನನ ಸ್ವಾಧೀನದಲ್ಲಿದ್ದದ್ದರಿಂದ, ರಾಮರಾಜನು ಅದನ್ನು ಒಮ್ಮೆಲೆ ಪ್ರವೇಶಿಸುವಂತೆ ಇದ್ದಿಲ್ಲ. ಆತನು ಮೊದಲು ಒಂದು ಸಾರೆ ಕುಂಜವನವನ್ನು ಸುತ್ತುವರಿದು ಬಂದು ಅದರ ದ್ವಾರಕ್ಷಕರಿಗೆ, ತಾನು ಬಂದಿರುವೆನೆಂದು ರಣಮಸ್ತಖಾನನಿಗೆ ಸುದ್ದಿಯನ್ನು ಹೇಳಲು ಆಜ್ಞಾಪಿಸಿದನು. ದ್ವಾರರಕ್ಷಕರು ಹೋಗಹೋಗುತ್ತ ಹಾದಿಯಲ್ಲಿ ಈ ಸುದ್ದಿಯನ್ನು ತಮ್ಮ ಜನರಿಗೆ ಹೇಳಲು, ಅವರು ಪರಮಾಶ್ಚರ್ಯಪಟ್ಟರು ಅದರೊಳಗೆ, ನಿನ್ನಿನ ದರ್ಬಾರದಲ್ಲಿ ಅನರ್ಥಪ್ರಸಂಗ ಒದಗಿರಲು, ಇಂದು ಬೆಳಗಾಗುವದರೊಳಗೆ ರಾಮರಾಜನು ಒಬ್ಬರೇ ಯಾಕೆ ಬಂದಿರಬಹುದೆಂದು ಅವರಿಗೆ ತಿಳಿಯದಾಯಿತು.