ನನ್ನ ರೂಪವನ್ನು ಅಚ್ಚಳಿಯದೆ ಹೋಲುತ್ತದೆ. ಇದಲ್ಲದೆ ಮೆಹೆರ್ಜಾನಳ ಕೆಲವು ಲಕ್ಷಣಗಳು ಆ ತರುಣ ಸರದಾರನ ಮೋರೆ-ಮಾತು-ನಡಿಗೆ-ದನಿ ಮೊದಲಾದವುಗಳಲ್ಲಿ ತೋರುತ್ತವೆ. ಮೆಹೆರ್ಜಾನಳು ಇಲ್ಲಿಗೆ ಬಂದಿರಲಿಕ್ಕಿಲ್ಲೆಂದು ಹ್ಯಾಗೆ ಹೇಳಬೇಕು? ಅದರಲ್ಲಿ ಧನಮಲ್ಲನೂ ಇಲ್ಲಿಯೇ ಇದ್ದಾನೆ; ರಣಮಸ್ತಖಾನನು ನನ್ನಿಂದ ಆಕೆಯಲ್ಲಿ ಮಗನೇ ನಿಶ್ಚಯವು ! ಆದರೆ ಆತನು ವಿಜಾಪುರದ ಬಾದಶಹನ ವಕೀಲನಾಗಿ ಬರುವ ಸಂಭವವು ಹ್ಯಾಗೆ ? ಹೆಮೆರ್ಜಾನಳು ನನಗೆ ವಿರೋಧಿಯಾಗಿದ್ದ ಪಕ್ಷದಲ್ಲಿ ತನ್ನ ಮಗನನ್ನು ವಕೀಲನನ್ನಾಗಿ ಹ್ಯಾಗೆ ಬರಗೊಟ್ಟಾಳು ? ನನ್ನ ಮೇಲೆ ಆಕೆಯ ಪ್ರೇಮವು ಯಥಾಸ್ಥಿತವಾಗಿದ್ದ ಪಕ್ಷದಲ್ಲಿ, ಇಷ್ಟು ದಿನ ಆಕೆಯು ನನ್ನ ಬಳಿಗೆ ಬಾರದೆ ಉಳಿಯುವದಾದರೂ ಹ್ಯಾಗೆ ? ಒಟ್ಟಿಗೆ ಇದೇನು ನಿಜವೋ, ಭ್ರಾಂತಿಯೋ, ಸ್ವಪ್ನವೋ ನನಗಂತು ತಿಳಿಯದಾಗಿದೆ. ಎಲ! ನಾನು ಭಯಂಕರವಾದ ಇಂದ್ರಜಾಲದಲ್ಲಿ ಸಿಕ್ಕಿಕೊಂಡೆನೋ ಏನೋ.
ಈ ಮೇರೆಗೆ ರಾಮರಾಜನು ಭ್ರಮಿಷ್ಟನಂತೆ ಆಚರಿಸುತ್ತಿರಲು, ರಣಮಸ್ತಖಾನನು ತಾನು ನಿಂತ ಸ್ಥಳದಲ್ಲಿಯೇ ನಿಂತುಕೊಂಡು ಅದನ್ನು ನೋಡಿ, ಈತನು ಇಂದೇ ಹೀಗೆ ಯಾಕೆ ಮಾಡುತ್ತಿರಬಹುದೆಂದು ಯೋಚಿಸ ಹತ್ತಿದನು. ಆತನಿಗೆ ರಾಮರಾಜನು ಒದರಿದ್ದೂ ಕೇಳಿಸಿದ್ದಿಲ್ಲ; ಕಣ್ಣೀರು ಸುರಿಸಿದ್ದೂ ಕಂಡಿದ್ದಿಲ್ಲ; ವಿಲಕ್ಷಣ ಬುದ್ದಿಶಾಲಿಯಾದ ಈ ಕುಲೀನ ಮನುಷ್ಯನು ಇಂದು ಹೀಗೆ ಯಾಕೆ ಮಾಡುತ್ತಿರಬಹುದೆಂಬದರ ಗೂಢವೇ ರಣಮಸ್ತಖಾನನಿಗೆ ತಿಳಿಯದಾಯಿತು. ತನ್ನ ಪ್ರೀತಿಯ ಕುಂಜವನದಲ್ಲಿ ಹಿಂದಕ್ಕೆ ಒದಗಿದ್ದೊಂದು ಮನೋಹರ ಪ್ರಸಂಗದ ನೆನಪಾದದ್ದರಿಂದ ಈತನು ಹೀಗೆ ಮಾಡುತ್ತಿರಬಹುದೆಂದು ತರ್ಕಿಸಿ ಆತನು ತನ್ನ ಸಮಾಧಾನ ಮಾಡಿಕೊಳ್ಳುತ್ತಿದ್ದನು. ಅಷ್ಟರಲ್ಲಿ ರಾಮರಾಜನು ನಿರಾಶೆಪಟ್ಟು ಇನ್ನು ವಿಜಯನಗರಕ್ಕೆ ಹೋಗಬೇಕೆಂದು ನಿಶ್ಚಯಿಸಿ ರಣಸ್ತಖಾನನು ನಿಂತಲ್ಲಿಗೆ ಬಂದು-ಕುಂಜವನವನ್ನು ನೋಡಲಿಕ್ಕೆ ನನಗೆ ಪರವಾನಿಗೆಯನ್ನು ಕೊಟ್ಟಿದ್ದರಿಂದ ನನ್ನ ಮೇಲೆ ನೀವು ಬಹಳ ಉಪಕಾರಮಾಡಿದಂತಾಯಿತು. ಆ ಉಪಕಾರವನ್ನು ಹ್ಯಾಗೆ ತೀರಿಸಬೇಕೆಂದಬುದು ನನಗೆ ತಿಳಿಯದಾಗಿದೆ. ತಿರುಗಿ ಮತ್ತೆ ಯಾವಾಗ ನನಗೆ ಕುಂಜವನಕ್ಕೆ ಬರುವ ಮನಸ್ಸಾದೀತೋ ಆಗ ನಾನು ಬರುವೆನು. ಈಗಿನಂತೆಯೇ ಆಗ ನನಗೆ ಪರವಾನಿಗೆಯನ್ನು ಕೊಡಿರೆಂದರಾಯಿತು” ಅನ್ನಲು, ರಣಮಸ್ತಖಾನನು ಅತ್ಯಂತ ಸಹಾನುಭೂತಿಯಿಂದ ಛೇ ಛೇ, ಇದೇನು ಮಾತಾಡೋಣವು! ಕುಂಜವನವು ನಿಮ್ಮದಿದ್ದು ನನಗಿಷ್ಟು ಯಾಕೆ ಹೇಳಿಕೊಳ್ಳಬೇಕು?