ಈ ಪುಟವನ್ನು ಪ್ರಕಟಿಸಲಾಗಿದೆ
೧೩೨
ಕನ್ನಡಿಗರ ಕರ್ಮಕಥೆ
ಎಲ್ಲಿಯೂ ಆ ಸುಂದರಿಯ ಗೊತ್ತು ಹತ್ತಲಿಲ್ಲ. ಆ ಸುಂದರಿಯು ಅಕಸ್ಮಾತ್ತಾಗಿ ಭೆಟ್ಟಿಯಾದರೆ, ತಾನು ಹ್ಯಾಗೆ ನಿಲ್ಲಬೇಕು ? ಹ್ಯಾಗೆ ಮಾತಾಡಬೇಕು ಎಂಬ ವಿಚಾರಗಳಲ್ಲಿ ಆತನ ಮನಸ್ಸು ತೊಡಗಿತ್ತು. ಆತನು ಆ ತರುಣಿಯನ್ನು ಶೋಧಿಸುತ್ತ ಹೋಗುತ್ತಿರಲು, ಲತಾಮಂಟಪದೊಳಗಿನ ಪೀಠದಲ್ಲಿ ತಾನು ಹುಡುಕುತ್ತಿದ್ದ ತರುಣಿಯು ಸಚಿಂತ ಮುದ್ರೆಯಿಂದ ಆಲೋಚಿಸುತ್ತ ಕುಳಿತದ್ದನ್ನು ಆತನು ನೋಡಿದನು. ಆಗ ಆ ತರುಣಿಯ ದರ್ಶನದ ವಿಷಯವಾಗಿ ಅತ್ಯಂತ ಆತುರವಾಗಿದ್ದ ಆ ತರುಣ ಸರದಾರನು ಹಿಂದುಮುಂದಿನ ವಿಚಾರ ವಿಲ್ಲದೆ ತಟ್ಟನೆ ಆಕೆಯ ಮುಂದೆ ಹೋಗಿ ನಿಂತುಕೊಂಡನು. ಹೀಗೆ ರಣಮಸ್ತಖಾನನು ಆ ತರುಣಿಯ ಎದುರಿಗೆ ಹೋಗಿ ನಿಂತದ್ದೊಂದೇ ತಡ, ಆಕೆಯು ಮೆಟ್ಟಿಬಿದ್ದು ತಟ್ಟನೆ ಎದ್ದು ನಿಂತುಕೊಂಡು ಮೈತುಂಬ ಸೆರಗು ಹೊದ್ದುಕೊಂಡಳು. ಆಗ ರಣಮಸ್ತಖಾನನ ಮನಸ್ಸಿನಲ್ಲಿ ಈ ವರೆಗೆ ಎಂದೂ ಅನುಭವಕ್ಕೆ ಬಾರದ ವಿಲಕ್ಷಣ ಭಾವನೆಯುಂಟಾಯಿತು.
****