ಒಬ್ಬ ಅಬಲೆಯನ್ನು ತಂದಿಟ್ಟು, ಆಕೆಯ ಸುಖಸರ್ವಸ್ವವನ್ನು ಮಣ್ಣುಗೂಡಿಸಿದನು. ಈಗಿಷ್ಟು ಮುದುಕನಾಗಿದ್ದರೂ ಈ ಕಾಮಾಂಧನು ನನ್ನ ಅಭಿಲಾಷೆಯಿಂದ ಇಲ್ಲಿಗೆ ಬಂದನು. ಯಾಕೆ, ಮಾತಾಡಿದ ನನ್ನ ಮಾತಿನ ವಿರುದ್ಧವಾಗಿ ನಿಮ್ಮ ಕಲ್ಕನೆಯೇನಾಗಿರುತ್ತೆಂಬದನ್ನು ಸ್ಪಷ್ಟವಾಗಿ ಹೇಳಿರಿ. ನನ್ನ ಸ್ಪಷ್ಟ ಮಾತುಗಳಿಗಾಗಿ ವಿಕಲ್ಪವೆಣಿಸದೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ನವಾಬಸಾಹೇಬ, ನಿನ್ನ ದರ್ಬಾರದಲ್ಲಿ ಎಲ್ಲ ಗಂಡಸರ ಎದುರಿಗೆ ಬುರುಕಿಯನ್ನು ತೆಗೆದುನಿಂತಾಗಲೇ ನಾನು ನಾಚಿಕೆಯನ್ನು ಬಿಟ್ಟು ಬಿಟ್ಟಿರುತ್ತೇನೆ. ಇನ್ನು ಯಾವನು ಈ ದುಷ್ಟನ ಶಾಸನ ಮಾಡುವನೋ, ಹೀಗೆ ಸ್ತ್ರೀಯರ ಪಾತಿವ್ರತ್ಯ ಭಂಗವಾಗುತ್ತಿರುವ ಈ ವಿಜಯನಗರದ ರಾಜ್ಯವನ್ನು ಯಾವನು ನಷ್ಟಪಡಿಸುವನೋ, ಆ ಪುರುಷಶ್ರೇಷ್ಠನೇ ನನಗೆ ಪುನಃ ಬುರುಕಿಯನ್ನು ಹೊದಿಸಲಿಕ್ಕೆ ಅಧಿಕಾರಿಯಾಗುವನು !
ಈ ಮೇರೆಗೆ ನುಡಿದು ನೂರುಜಹಾನಳು ಸುಮ್ಮನಾದಳು. ರಣಮಸ್ತಖಾನನು ಆಕೆಯ ಮಾತುಗಳನ್ನು ಕೇಳಿ ಅತ್ಯಂತ ಚಕಿತನಾದನು. ಆಕೆಯ ಮುಂಗಾಲು ಪುಟಿಕೆಯ ಪ್ರತಿ ಒಂದು ಮಾತು ಆತನಿಗೆ ಅಕ್ಷರಶಃ ನಿಜವಾಗಿ ತೋರಿತು. ರಾಮರಾಜನು ಈ ದಿನ ಭ್ರಮಿಷ್ಟನ ಹಾಗೆ ಮಾಡಿದ್ದರ ಕಾರಣವು ಅವನ ಮನಸ್ಸಿಗೆ ಈಗ ಹೊಳೆದು, ಆತನು ಸಂತಾಪಗೊಂಡನು. ತಾನು ಇಲ್ಲಿಗೆ ಇಷ್ಟು ದೊಡ್ಡ ವಕೀಲನಾಗಿ ಬಂದಿದ್ದು ಇಷ್ಟು ಸ್ವಾಭಾವಿಕ ಮಾತಿನ ಕಲ್ಪನೆಯಾಗದ್ದಕ್ಕೆ ಆತನು ತನ್ನನ್ನು ಬಹಳವಾಗಿ ಹಳಿದುಕೊಂಡನು. ನಾನು ಮಹಾಮೂರ್ಖನು, ನನ್ನನ್ನು ಮೋಸಗಳಿಸಲಿಕ್ಕೆ ಆ ನೀಚನು ಬಂದಿದ್ದನು, ಎಂದು ಯೋಚಿಸುವಾಗ ಆತನ ಕಣ್ಣುಗಳು ಕೆಂಡದಂತಾಗಿದ್ದವು, ತುಟಿಗಳು ನಡುಗಹತ್ತಿದವು. ಏನು ಮಾಡಲಿ ಏನು ಬಿಡಲಿ ಅನ್ನುವಹಾಗಾಗಿ, ಆತನು ಏನೋ ಮಾತಾಡಬೇಕೆಂದು ನೂರಜಹಾನಳ ಕಡೆಗೆ ನೋಡಿದನು. ಆಗ ಆಕೆಯ ಕಣ್ಣೂಳಗಿಂದ ಒಂದೇಸವನೆ ನೀರು ಸುರಿಯುತ್ತಿದ್ದವು. ಆಕೆಗೆ ಉಂಟಾಗಿದ್ದ ಸಂತಾಪದಿಂದ ಆಕೆಯ ಅವಸಾನವು ಕುಗ್ಗಿದಂತೆ ಆಗಲು, ಆಕೆಯು ಗಿಡದ ಬೊಡ್ಡೆಗೆ ಆತುಕೊಂಡು ಅದರ ಆಶ್ರಯದಿಂದ ನಿಂತುಕೊಂಡಳು. ಆದರೆ ರಣಮಸ್ತಖಾನನು ತನ್ನ ಕಡೆಗೆ ನೋಡಿದ ಕೂಡಲೆ ಆಕೆಯು ಅವಸಾನಗೊಂಡು ತನ್ನ ಕಣ್ಣೀರುಗಳನ್ನು ಒರಸಿಕೊಂಡು ಆತನನ್ನು ಕುರಿತು- “ನಾನು ಒಬ್ಬ ಯಃಕಶ್ಚಿತ ಸ್ತ್ರೀಯು, ನನ್ನನ್ನು ಹಿಡಕೊಂಡು ಹೋಗಿ ಅವಮಾನಗೊಳಿಸಿದ್ದರೂ ಮಹತ್ವವಿದ್ದಿಲ್ಲ. ಆದರೆ ಈವರೆಗೆ ನನ್ನಂಥ ಎಷ್ಟು ಜನರನ್ನು ಆ ದುಷ್ಟನು ಅವಮಾನಗೊಳಿಸಿರುವನೋ ಯಾರಿಗೆ ಗೊತ್ತು ! ಒಬ್ಬ ಸುಂದರಿಯ