ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರತಿಜ್ಞೆ
೧೪೩
ನೂರಜಹಾನಳು ಇರುವಳೋ, ಇಲ್ಲವೋ ಎಂಬದನ್ನು ತಿಳಕೊಳ್ಳುವಷ್ಟು ಎಚ್ಚರವೂ ಆತನ ಮೈಮೇಲೆ ಇದ್ದಿದ್ದಿಲ್ಲ. ಸಂತಾಪದಿಂದ ಅವನ ಸರ್ವಾಂಗವು ತಪ್ತವಾಗಿತ್ತು. ಆತನು ಕಡೆಗೆ ನೂರಜಹಾನಳನ್ನು ಕುರಿತು- “ನೆಟ್ಟಗಾಯಿತು, ನೀನು ಇಂದು ನನ್ನ ಕಣ್ಣುಗಳನ್ನು ತೆರದೆ ! ನಾನು ಈಗ ಬಹಳ ಮಾತಾಡುವದಿಲ್ಲ. ನನ್ನಲ್ಲಿ ಏನಾದರೂ ಸಾಮರ್ಥ್ಯವಿದ್ದದ್ದೇ ನಿಜವಿದ್ದರೆ, ಆ ದುಷ್ಟನ ಶಾಸನವನ್ನು ಮಾಡಿ ತೀರುವೆನು. ನನ್ನ ಭರ್ಜಿಯ ತುದಿಗೆ ಆ ದುಷ್ಟನ ರುಂಡವನ್ನು ಚುಚ್ಚಿಕೊಂಡು ಬಂದು, ನಿನ್ನ ಚರಣದ ಮೇಲೆ ಕೆಡವುವೆನು, ಈ ಅಧರ್ಮದ ರಾಜ್ಯವನ್ನು ಮಣ್ಣುಗೂಡಿಸಿದ ಬಳಿಕ ನಿನ್ನ ಪ್ರಾಣಿಗ್ರಹಣದ ಮಾತು. ಅಲ್ಲಿಯವರೆಗೆ ನೀನು ಮಾತ್ರ ಈಗ ಇದ್ದ ಹಾಗೆಯೇ ಇರು ನನ್ನ ಈ ಪ್ರತಿಜ್ಞೆಯು ಒಂದು ವರ್ಷದೊಳಗೆ ನಿಜವಾಗದಿದ್ದರೆ, ನಿನಗೆ ಮೋರೆ ತೋರಿಸಲಿಕ್ಕಿಲ್ಲ !” ಎಂದು ನುಡಿದು ರಣಮಸ್ತಖಾನನು ತಟ್ಟನೆ ಅಲ್ಲಿಂದ ಹೊರಟುಹೋದನು. ಮಗನ ಈ ಪ್ರತಿಜ್ಞೆಯನ್ನು ಅಕಸ್ಮಾತ್ತಾಗಿ ಅಲ್ಲಿಗೆ ಬಂದು ಮರೆಗೆ ನಿಂತಿದ್ದ ಮಸಾಹೇಬರು ಕೇಳಿ ಚಕಿತರಾದರು.
****