ಈ ಪುಟವನ್ನು ಪ್ರಕಟಿಸಲಾಗಿದೆ
 ।। ಶ್ರೀ ಶೇಷಾಚಲ ಸದ್ಗುರುವೇ ನಮಃ ।।  

ಕನ್ನಡಿಗರ ಕರ್ಮಕಥೆ

ಅಥವಾ

ವಿಜಯನಗರ ರಾಜ್ಯದ ನಾಶ !

೧ನೆಯ ಪ್ರಕರಣ

ವಿನಾಶಾಂಕುರ


ವಿಜಯನಗರದ ಕೃಷ್ಣದೇವರಾಯನ ಕಾಲವು, ಕನ್ನಡಿಗರ ಅತ್ಯಂತ ಗೌರವದ ಕಾಲವೆಂದು ಹೇಳಲವಶ್ಯವಿಲ್ಲ. ಆಗಿನ ಕನ್ನಡಿಗರ ಪ್ರತಾಪದ ಅಬ್ಬರದಲ್ಲಿ ನೆರೆಹೊರೆಯ ಮುಸಲ್ಮಾನ ಅರಸರು ತತ್ತರಿಸುತ್ತಲಿದ್ದರು. ಇಡಿಯ ದಕ್ಷಿಣ ಹಿಂದುಸ್ಥಾನವು ಕೃಷ್ಣದೇವರಾಯನ ಸ್ವಾಮಿತ್ವಕ್ಕೆ ಒಳಗಾಗಿತ್ತೆಂದು ಹೇಳಬಹುದು. ಮುಸಲ್ಮಾನರಿಗೆ ಮುಂದೆ ಬಹುದಿವಸ ಕೃಷ್ಣದೇವರಾಯನ ಹಾಗು ಅವನ ದಂಡಾಳುಗಳ ಭಯವು ತಪ್ಪಲಿಲ್ಲ. ಕೃಷ್ಣದೇವರಾಯನು ಜೀವದಿಂದಿರುವವರೆಗೆ ವಿಜಯನಗರದ ಮೇಲೆ ಸಾಗಿಬರಲಿಕ್ಕೆ ವಿಜಾಪುರದ ಆದಿಲಶಹನಿಗೆ ಧೈರ್ಯವಾಗಲಿಲ್ಲ. ಈ ಕಾಲದಲ್ಲಿ ಕನ್ನಡಿಗರ ಉತ್ಕರ್ಷದ ಪರಮಾವಧಿಯಾಯಿತೆಂದು ಹೇಳಬಹುದು. ವಿದ್ವಾಂಸರಿಗೆ ಆಶ್ರಯವುದೊರೆತು ವೈದಿಕ ವಿದ್ಯೆಗೆ ಉತ್ತೇಜವಾಯಿತು. ದೊಡ್ಡ ದೊಡ್ಡ ಕಟ್ಟಡಗಳಿಂದ ರಾಜಧಾನಿಯು ಶೃಂಗರಿಸಲ್ಪಟ್ಟಿತು. ಕೃಷ್ಣಸ್ವಾಮಿಯಗುಡಿ, ಹಜಾರರಾಮಸ್ವಾಮಿಯ ಗುಡಿ, ವಿಜಯವಿಠ್ಠಲನ ಗುಡಿ ಮೊದಲಾದ ಪ್ರಸಿದ್ಧ ಗುಡಿಗಳೂ ಕಟ್ಟಿಸಲ್ಪಟ್ಟು, ಧರ್ಮದ ಬಾಹ್ಯಸ್ವರೂಪಕ್ಕೆ ಕಳೆಯೇರಿತು. ತುಂಗಭದ್ರೆಯ ಕಾಲುವೆ, ಬಸವನ ಕಾಲುವೆ, ದೊಡ್ಡದೊಂದು ಕೆರೆ ಇವುಗಳಿಂದ ಪ್ರಜೆಗಳ ಸುಖಸಮೃದ್ಧಿಗಳು ಹೆಚ್ಚಿದವು. ಕೃಷ್ಣದೇವರಾಯನು ತನ್ನ ಪ್ರೀತಿಯ ಹೆಂಡತಿಯಾದ ನಾಗಲಾದೇವಿಯ