ಏನು ಹೇಳುವನೆಂಬದನ್ನು ಮೊದಲು ಕೇಳಿ ಕೊಂಡು , ಆಮೇಲೆ ಮಾಡತಕ್ಕದ್ದನ್ನು ಮಾಡಬೇಕು.” ಬಾದಶಹನ ಈ ಅಪ್ಪಣೆಯನ್ನು ಕೇಳಿ, ದರ್ಬಾರದ ಜನರು ಬಹಳ ನಿರಾಶೆಪಟ್ಟರು. ಬಾದಶಹನು ಹೀಗೆ ಆಜ್ಞಾಪಿಸಬಹುದೆಂಬದು ಯಾರ ಕನಸು ಮನಸುಗಳಲ್ಲಿಯೂ ಬಂದಿದ್ದಿಲ್ಲ. ಎಲ್ಲ ಜನರು ಖಿನ್ನರಾದರು. ಅವರಿಗೆ ಪರಮಾಶ್ಚರ್ಯವಾಯಿತು. ಅವರು ಬಾದಶಹನನ್ನುದ್ದೇಶಿಸಿ “ಇನ್ನೇನು ರಾಮರಾಜನನ್ನು ವಿಚಾರಿಸುವದು ? ರಣಮಸ್ತಖಾನನು ಎಲ್ಲ ಸಂಗತಿಗಳನ್ನು ಹೇಳಿಯೇ ಇದ್ದಾನೆ. ಪ್ರತ್ಯಕ್ಷ ನಮ್ಮ ವಕೀಲನು ದರ್ಬಾರದಲ್ಲಿದ್ದು, ಹೀಗೆ ಮಾಡುವದು ಯೋಗ್ಯವಲ್ಲೆಂದು ಆತನು ನಿರ್ಧಾರದಿಂದ ನಿಷೇಧಿಸುತ್ತಿರಲು, ಅದನ್ನು ಲೆಕ್ಕಿಸದೆ ರಾಮರಾಜನು ಒಬ್ಬ ಸರದಾರನ ಮಗಳ ಮಾನಖಂಡನ ಮಾಡಿದ ಬಳಿಕ ಇನ್ನೇನು ಉಳಿಯಿತು ? ಈ ಪ್ರಸಂಗದಲ್ಲಿ ರಾಮರಾಜನನ್ನು ಕೇಳುವ ಕಾರಣವಿಲ್ಲ, ಆತನ ಹಂಗು ಇಡದೆ ವಿಜಯನಗರದ ಮೇಲೆ ದಂಡೆತ್ತಿ ಹೋಗಲು ಸೈನ್ಯಕ್ಕೆ ಅಪ್ಪಣೆಯನ್ನು ಕೊಡಬೇಕು. ಆ ಹಿಂದುರಾಜನು ಬಹಳ ಅಂಗಲಾಚಿ ಹೇಳಿಕೊಂಡರೆ, ಬೇಕಾದರೆ ಆತನಿಂದ ಅಪಾರವಾದ ಕಪ್ಪವನ್ನು ಸ್ವೀಕರಿಸಿ, ಆತನ ಮನೆತನಕ್ಕೆ ಸಂಬಂಧಿಸಿದ ಒಬ್ಬ ಕನ್ಯೆಯನ್ನು ಜನಾನಖಾನೆಯಲ್ಲಿ ಸೇರಿಸಿಕೊಳ್ಳತಕ್ಕದ್ದು ಎಂದು ಪೌರುಷದ ಮಾತುಗಳನ್ನು ಆಡಿದ್ದಲ್ಲದೆ, ಅದರಂತೆ ತಮ್ಮ ತಮ್ಮೊಳಗೂ ಮಾತಾಡಿಕೊಳ್ಳಹತ್ತಿದರು ! ಆದರೆ ಬಾದಶಹನು ಈ ಪ್ರಸಂಗದಲ್ಲಿ ಬಹು ಸಮಾಧಾನವನ್ನು ತಾಳಿದನು. ಆತನು ತನ್ನ ಮಾತನ್ನು ತಿರುಗಿಸಲಿಲ್ಲ. ರಾಮರಾಜನ ವಿಚಾರವನ್ನು ಕೇಳಿಕೊಂಡ ಹೊರತು ಏನೂ ಮಾಡುವ ಹಾಗಿಲ್ಲೆಂದು ಸ್ಪಷ್ಟವಾಗಿ ಹೇಳಿದನು. ಅದನ್ನು ಕೇಳಿ ಜನರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಬಾದಶಹನು ಇಂದು ಹೀಗೆ ವಿಲಕ್ಷಣ ರೀತಿಯಿಂದ ನಡೆದದ್ದನ್ನು ನೋಡಿ ಜನರು ಬಾದಶಹನ ಬುದ್ದಿಯು ಭ್ರಂಶವಾಯಿತೆಂತಲೂ, ಆತನು ರಾಮರಾಜನಿಗೆ ಹೆದರುವನೆಂತಲೂ ಭಾವಿಸ ಹತ್ತಿದರು. ಈ ಅಂಜುಬುರುಕತನದಿಂದ ರಾಮರಾಜನು ಮತ್ತಷ್ಟು ಸೆಟೆಯಲು, ಬಾದಶಹರ ಗೌರವಕ್ಕೆ ಬಾಧೆಬರುವದೆಂದು ತಿಳಿದು, ಬಾದಶಹರ ಮನಸ್ಸನ್ನು ತಿರುಗಿಸಲಿಕ್ಕೆ ಅವರ ವಿಶ್ವಾಸದ ಕೆಲವು ಜನರಿಗೆ ಸೂಚಿಸಿದರು. ಆದರೆ ಅಂದು ಬಾದಶಹನ ಮುಂದೆ ಯಾರ ಆಟವೂ ನಡೆಯಲಿಲ್ಲ. ಕಡೆಗೆ ಬಾದಶಹನು ತನ್ನ ಮನಸ್ಸಿನಂತೆ ಪತ್ರವನ್ನು ಬರೆದು ಸಿದ್ಧಮಾಡಿ, ಅದನ್ನು ಒಯ್ದು ರಾಮರಾಯನಿಗೆ ಕೊಡುವಂತೆ ರಣಮಸ್ತಖಾನನಿಗೆ ಆಜ್ಞಾಪಿಸಿದನು. ಅದಕ್ಕೆ ರಣಮಸ್ತಖಾನನು- “ಇಂಥ ಪತ್ರವನ್ನು ನಾನು ತಕ್ಕೊಂಡು ಹೋಗಿ ರಾಮರಾಜನಿಗೆ ಮುಟ್ಟಿಸುವದು ಬಹಳ
ಪುಟ:Kannadigara Karma Kathe.pdf/೧೭೦
ಈ ಪುಟವನ್ನು ಪ್ರಕಟಿಸಲಾಗಿದೆ
ಔದಾಶೀನ್ಯ
೧೫೫