ತಮ್ಮಂತೆಯೇ ನಡೆಯುತ್ತಿದ್ದರು. ರಣಮಸ್ತಖಾನನಂಥ ಏರಿಕೆಯ ರಕ್ತದ ತರುಣನನ್ನು ವಕೀಲನನ್ನಾಗಿ ಕಳಿಸತಕ್ಕದ್ದೇ ಇದ್ದಿಲ್ಲ; ಆದರೆ ಕೆಲವು ಅಂತಸ್ಥ ಮುರುವತ್ತುಗಳಿಂದ ಆತನನ್ನು ಬಾದಶಹರು ನಿಯಮಿಸಿ ಕಳಿಸಬೇಕಾಯಿತು. ನೆಟ್ಟಗಾಯಿತು, ಬಾದಶಹರಿಗೆ ರಣಮಸ್ತಖಾನನ ನಿಜವಾದ ಯೋಗ್ಯತೆಯು ಈಗಾದರೂ ಗೊತ್ತಾದದ್ದು ನೆಟ್ಟಗಾಯಿತು. ತಾವು ಹೇಳಿದ ಮಾತುಗಳನ್ನೆಲ್ಲ ನಾನು ಬಾದಶಹರ ಚರಣದೆಡೆಯಲ್ಲಿ ವಿಜ್ಞಾಪಿಸಿಕೊಳ್ಳುವೆನು, ತಾವೂ ಪತ್ರವನ್ನು ಬರೆದೆ ಬರೆಯುವಿರಿ, ಬೇಗನೆ ಪತ್ರವನ್ನು ಕೊಟ್ಟು ನನ್ನನ್ನು ದಾಟಹಾಕಬೇಕು ಎಂದು ಹೇಳಿದನು. ವಕೀಲನ ಈ ಮಾತುಗಳನ್ನು ಕೇಳಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ಆತನು ಆ ವಕೀಲನ ಮಾನ-ಮರ್ಯಾದೆಗಳನ್ನು ಅತ್ಯುತ್ತಮ ರೀತಿಯಿಂದ ಮಾಡಿದನು. ಪತ್ರೋತ್ತರವನ್ನಾದರೂ ಬೇಗನೆ ಬರೆದು ವಕೀಲನ ಕೈಯಲ್ಲಿ ಕೊಟ್ಟನು. ವಕೀಲನು ರಾಮರಾಜನ ಅನುಜ್ಞೆಯನ್ನು ಪಡೆದು ವಿಜಾಪುರಕ್ಕೆ ಹೋದನು.
ವಕೀಲನು ವಿಜಾಪುರಕ್ಕೆ ಹೋಗಿ ರಾಮರಾಜನ ಆ ಪತ್ರವನ್ನು ಬಾದಶಹನ ಕೈಯಲ್ಲಿ ಕೊಟ್ಟನು. ಬಾದಶಹನು ಅದನ್ನು ಏಕಾಂತದಲ್ಲಿ ಓದಿದನು. ಆ ಪತ್ರದಲ್ಲಿ ರಾಮರಾಜನು- “ಆ ತರುಣ ಸ್ತ್ರೀಯ ಲಜ್ಜಾಹರಣ ಮಾಡುವ ಉದ್ದೇಶವು ನಮ್ಮದಿದ್ದಿಲ್ಲ. ನಮ್ಮ ವಿರುದ್ಧವಾಗಿ ಒಳಸಂಚುಗಳು ನಡೆದು, ಗುಲುಬುರ್ಗೆಯ ಕಡೆಯಿಂದ ಅಹಮ್ಮದನಗರದ ಕಡೆಗೆ ಇವರು ಪತ್ರಗಳನ್ನು ಒಯ್ಯುತ್ತಾರೆಂಬ ಸಂಶಯವು ನಮಗೆ ಬಂದಿತು. ಹೀಗೆ ಒಳಸಂಚುಗಳು ನಡೆದಿರುವವೆಂದು ಅಲ್ಲಿದ್ದ ನಮ್ಮ ಗುಪ್ತಚಾರರು ನಮಗೆ ಹೇಳಿದ್ದರು ; ಆದ್ದರಿಂದ ಹಾಗೆ ನಾವು ಬುರುಕಿ ತೆಗೆದು ಶೋಧಿಸಿ ನೋಡಬೇಕಾಯಿತು. ನಮ್ಮ ಸ್ಥಿತಿಯಲ್ಲಿ ತಾವು ಇದ್ದರೆ, ತಾವೂ ನಮ್ಮ ಹಾಗೆಯೇ ನಡೆಯಬೇಕಾಗುತ್ತಿತ್ತು. ನಮಗೂ ತಮಗೂ ಸ್ನೇಹವಿರುತ್ತದೆ. ಅದನ್ನು ಮುರಿಯುವ ಇಚ್ಛೆಯು ನಮಗೆ ಎಳ್ಳಷ್ಟಾದರೂ ಇರುವದಿಲ್ಲ. ಆದರೆ ಅಷ್ಟಕ್ಕಾಗಿ ಸುಮ್ಮನೆ ತಮ್ಮ ಹೆಸರಿನಿಂದ ನಮ್ಮನ್ನು ಬೆದರಿಸಿ ಅನ್ಯರು ಬೇಕಾದ ಹಾಗೆ ಒಳಸಂಚುಗಳನ್ನು ನಡೆಸಿದರೆ, ತಾವು ಬೆದರಿ ಅವನ್ನು ನಡಿಸಿಕೊಡಬೇಕೆಂದು ನೀವು ಸರ್ವಥಾ ಹೇಳುವುದಿಲ್ಲೆಂಬ ನಂಬಿಗೆಯು ನಮಗೆ ಇರುತ್ತದೆ. ಹೀಗೆಂದು ನಾವು ನಿಮ್ಮ ತರುಣ ವಕೀಲರಿಗೆ ಬೇಕಾದಷ್ಟು ಹೇಳಿದೆವು. ಆದರೆ ಅವರು ನಮ್ಮ ದರ್ಬಾರದಲ್ಲಿ ನಮ್ಮ ಮುಂದೆ ನಮ್ಮ ತಿರಸ್ಕಾರವನ್ನು ಮಾಡಿದರು. ಆಗಲೇ ಅವರನ್ನು ಪ್ರತಿಬಂಧದಲ್ಲಿಡುತ್ತಿದ್ದೆವು; ಆದರೆ ತಮ್ಮ ಮೋರೆಯನ್ನು ನೋಡಿ ನಾವು ಹಾಗೆ ಮಾಡಲಿಲ್ಲ. ಆ ನಿಮ್ಮ ತರುಣ ವಕೀಲರು,