ಈ ಪುಟವನ್ನು ಪ್ರಕಟಿಸಲಾಗಿದೆ
೧೬೪
ಕನ್ನಡಿಗರ ಕರ್ಮಕಥೆ

ಕಾರಣವನ್ನು ಹೇಳಲಿ ? ನನ್ನ ಮನಸ್ಸಿನ ಅಸಮಾಧಾನದ ಕಾರಣವನ್ನು ನಿಮ್ಮ ಮುಂದೆ ಈ ಮೊದಲೇ ಹೇಳಿಬಿಟ್ಟಿದ್ದೇನೆ. ಬಾದಶಹರು ನನ್ನನ್ನು ಅವಮಾನಗೊಳಿಸಿದ್ದು ನನಗೆ ದುಸ್ಸಹವಾಗಿದೆ. ಇದರ ಹೊರತು ಬೇರೆ ಕಾರಣವೇನೂ ಇರುವದಿಲ್ಲ. ನಾನು ಆವೇಶದಿಂದ ಮುಂದಕ್ಕೆ ಸಾಗುತ್ತಿರುವಾಗ, ಬಾದಶಹರು ನನ್ನ ಕಾಲುಗಳನ್ನೇ ಮುರಿದಂತಾಯಿತು. ಮಹತ್ವಾಕಾಂಕ್ಷೆಗಳೆಲ್ಲ ಲಯವಾದವು. ಇನ್ನು ವಿಜಾಪುರ ರಾಜ್ಯದಲ್ಲಿ ಕೆಲಸ ಮಾಡದೆ ಬೇರೆದೊಂದು ರಾಜ್ಯದಲ್ಲಿ ಕೆಲಸಮಾಡಿ ದೈವವನ್ನು ಪರೀಕ್ಷಿಸಬೇಕೆಂದು ಮಾಡಿದ್ದೇನೆ. ನನಗೆ ಏನೂ ತಿಳಿಯದಾಗಿದೆ. ಒಮ್ಮೊಮ್ಮೆಯಂತು ವಿಲಕ್ಷಣ ವಿಚಾರ ಮನಸ್ಸಿನಲ್ಲಿ ಬರುತ್ತವೆ. ನನ್ನ ಮನಸ್ಸಿನಲ್ಲಿದ್ದದ್ದನ್ನು ಈಗ ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನು ಮೇಲೆ ನನ್ನನ್ನು ಏನೂ ಕೇಳಬೇಡಿರಿ. ಅದರಿಂದ ನನ್ನ ತಾಯಿಯು ತಿರುಗಿ ಏನು ಮಾತಾಡುವಳೆಂಬದರ ಹಾದಿಯನ್ನು ಸಹ ಆತನು ನೋಡಲಿಲ್ಲ.

ಮಗನು ಹೀಗೆ ತಟ್ಟನೆ ಹೊರಟುಹೋದದ್ದನ್ನು ನೋಡಿ ಮಾಸಾಹೇಬರಿಗೆ ಬಹಳ ಆಶ್ಚರ್ಯವಾಯಿತು. ಆದರೂ ಆವೇಶದ ಭರದಲ್ಲಿ ಹೋಗಿರುವನು; ಇನ್ನೊಮ್ಮೆ ಕರಿಸಿ ಸಮಾಧಾನದಿಂದ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದರೆ ಕೇಳುವೆನೆಂದು ಮಾಸಾಹೇಬರು ಸಮಾಧಾನ ಮಾಡಿಕೊಂಡರು. ಕೆಲವು ದಿವಸ ಆತನನ್ನು ಮಾತಾಡಿಸದೆ ಹಾಗೇ ಬಿಡಬೇಕೆಂದು ಅವರು ಮಗನ ಉಸಾಬರಿಯನ್ನು ಬಿಟ್ಟು ಬಿಟ್ಟರು ; ಆದರೆ ಅವರಿಂದ ಹಿತವಾಗಲಿಲ್ಲ. ರಣಮಸ್ತಖಾನನ ಸ್ಥಿತಿಯು ದಿನದಿನಕ್ಕೆ ಕೆಡುತ್ತ ಹೋಯಿತು. ಆತನು ರಾತ್ರಿಯಲ್ಲಿ ಸಹ ಮನಬಂದಂತೆ ತಿರುಗಹತ್ತಿದನು. ಅದನ್ನು ನೋಡಿ ಮಾತ್ರ ಮಾಸಾಹೇಬರು ಬಹಳ ಚಿಂತೆಗೊಳಗಾದರು. ಇನ್ನು ಮೇಲೆ ಮಗನನ್ನು ಹಾದಿಗೆ ಹಚ್ಚದಿದ್ದರೆ ಪರಿಣಾಮವಾಗದೆಂದು ಅವರು ತಿಳಕೊಂಡರು. ಲೈಲಿಯೊಡನೆ ಅವರ ಆಲೋಚನೆಗಳು ನಡೆದವು. ಬರಿಯ ಬಾದಶಹನ ಅಪಮಾನದಿಂದ ಹೀಗಾಗಿರದೆ, ನೂರಜಹಾನಳ ಹಳಬಂಡವೇ ಮಗನನ್ನು ಈ ಮನೆಗೆ ತಂದು ಬಿಟ್ಟಿತೆಂದು ಮಾಸಾಹೇಬರು ನಿಶ್ಚಯಿಸಿದರು. ನೂರಜಹಾನಳ ಸಂಬಂಧದಿಂದ ಏನಾದರೂ ಹೆಚ್ಚು ಕಡಿಮೆಯಾದ್ದರಿಂದ ಮಗನ ಸ್ಥಿತಿಯು ಹೀಗಾಗಿದೆ, ಆದ್ದರಿಂದ ನಾವಿಬ್ಬರೂ ವಿಜಾಪುರಕ್ಕೆ ಹೋಗಿ ನಿಜವಾದ ಸಂಗತಿಗಳನ್ನು ತಿಳಕೊಂಡು ಬರೋಣವೆಂದು ಮಾಸಾಹೇಬರು ಲೈಲಿಯೊಡನೆ ಆಲೋಚಿಸಿದರು. ಅವರ ಆಲೋಚನೆಯು ನಿಶ್ಚಿತವಾಯಿತು. ಆ ನಿರ್ಧಾರದ ಸ್ತ್ರೀಯು ಕೂಡಲೇ ಮಗನನ್ನು ಕರೆಸಿ, “ನಾನು ಲೈಲಿಯನ್ನು ಕರಕೊಂಡು ವಿಜಾಪುರಕ್ಕೆ ಹೋಗಿ ಎಲ್ಲ ಸಂಗತಿಗಳನ್ನು ತಿಳಕೊಂಡು